ಕರಾವಳಿ
ಮಂಗಳೂರು: ಹಣಕ್ಕೆ ಬೇಡಿಕೆ ಇಟ್ಟ ನಕಲಿ ಲೋಕಾಯುಕ್ತ ಅಧಿಕಾರಿ ಅರೆಸ್ಟ್
Views: 32
ಕನ್ನಡ ಕರಾವಳಿ ಸುದ್ದಿ: ಲೋಕಾಯುಕ್ತ ಹೆಸರಲ್ಲಿ ಪುರಸಭೆ ರೆವೆನ್ಯೂ ಅಧಿಕಾರಿಗಳಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ ನಕಲಿ ಲೋಕಾಯುಕ್ತ ಅಧಿಕಾರಿಯನ್ನು ಮಂಗಳೂರಿನ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಆಂಧ್ರದ ನಲ್ಲಗುಟ್ಲ ಗ್ರಾಮದ ಧನಂಜಯ್ ರೆಡ್ಡಿ ತೋಟ ಬಂಧಿತ ಆರೋಪಿ. ಈತ ಮಂಗಳೂರಿನ ಸೋಮೇಶ್ವರ ಪುರಸಭೆಯ ಕಂದಾಯ ಅಧಿಕಾರಿ ಪುರುಷೋತ್ತಮ ಅವರಿಗೆ ಕರೆ ಮಾಡಿ ತಾನು ಲೋಕಾಯುಕ್ತ ಅಧಿಕಾರಿ. ನಿಮ್ಮ ಮೇಲೆ ಆರೋಪಗಳಿದ್ದು, ರೇಡ್ ಮಾಡಲಾಗುತ್ತಿದೆ. ನಮ್ಮ ಟೆಕ್ನಿಕಲ್ ಟೀಂ ನಿಮ್ಮ ಆಫೀಸಿಗೆ ಬರುವ ಮೊದಲು ಎಲ್ಲವನ್ನೂ ಸರಿ ಪಡಿಸಲು ಹಣ ನೀಡಬೇಕು. ಇಲ್ಲವಾದಲ್ಲಿ ತೊಂದರೆಯಾಗಲಿದೆ ಎಂದು ಬೇಡಿಕೆಯಿಟ್ಟಿದ್ದ.
ಅನುಮಾನಗೊಂಡ ಪುರುಷೋತ್ತಮ ಅವರು ಮಂಗಳೂರು ಲೋಕಾಯುಕ್ತ ಕಚೇರಿಗೆ ಕರೆ ಮಾಡಿ ವಿಚಾರಿಸಿದ್ದರು. ಈ ವೇಳೆ ಅಂತಹ ಹೆಸರಿನ ಯಾವುದೇ ಸಿಬ್ಬಂದಿ, ಅಧಿಕಾರಿ ಇಲ್ಲ ಎಂದು ತಿಳಿದುಬಂದಿತ್ತು.
ಅಲ್ಲದೇ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಉಳ್ಳಾಲ ಪೊಲೀಸರು ನಕಲಿ ಲೋಕಾಯುಕ್ತ ಅಧಿಕಾರಿಯನ್ನು ಬಂಧಿಸಿದ್ದಾರೆ.