ಆರೋಗ್ಯ

ಮಂಗಳೂರು ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೆರಿಗೆ ನಂತರ ಮಗು ಅದಲು ಬದಲು.! ಉನ್ನತ ಮಟ್ಟದ ತನಿಖೆಗೆ ಒತ್ತಾಯ

Views: 109

ಮಂಗಳೂರು : ಮಂಗಳೂರಿನ ಪ್ರಸಿದ್ದ ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೆರಿಗೆ ನಂತರ  ಮಗು ಅದಲು ಬದಲು ಆಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ  ಉನ್ನತ ಮಟ್ಟದ ತನಿಖೆ ನಡೆಸಿ ನ್ಯಾಯ ಕೊಡುವಂತೆ ಪೋಷಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸಂತ್ರಸ್ಥೆಯ ಅಣ್ಣ ತುಳುನಾಡ ರಕ್ಷಣಾ ವೇದಿಕೆಯ ಗಮನಕ್ಕೆ ಈ ವಿಷಯ ತಂದಿದ್ದು, ಈ ನಿಯೋಗದ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ನಿಯೋಗದ ಮನವಿ ಆಲಿಸಿದ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಸಂತ್ರಸ್ಥೆ ಅಣ್ಣ ಮಂಗಳೂರಿನ ಸರಕಾರಿ ಲೇಡಿಗೋಷನ್‌ ಆಸ್ಪತ್ರೆಯಲ್ಲಿ ಹೆರಿಗೆ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ತಂಗಿಯು 9 ತಿಂಗಳ ಗರ್ಭಿಣಿಯಾಗಿದ್ದು, ಅಗಸ್ಟ್  17 ರಂದು ಶನಿವಾರ ರಾತ್ರಿ ಪರೀಕ್ಷೆ ಮಾಡಿಸುವ ಸಲುವಾಗಿ ಬಂಟ್ವಾಳದ ಸರಕಾರಿ. ಆಸ್ಪತ್ರೆಗೆಂದು ಹೋದಾಗ ಅಲ್ಲಿನ ವೈದ್ಯರು ಪರೀಕ್ಷೆ ಮಾಡಿ ಇಲ್ಲಿ ಮಹಿಳಾ ವೈದ್ಯರು ಇರದ ಕಾರಣ ತಾವು ಮಂಗಳೂರಿನ ಸರಕಾರಿ ಲೇಡಿಗೋಷನ್‌ ಆಸ್ಪತ್ರೆಗೆ  ತಂಗಿಯನ್ನು ಕರೆದುಕೊಂಡು ಹೋಗುವಂತೆ ತಿಳಿಸಿದ್ದರು. ಅವರು ಹೇಳಿದಂತೆ ನಾನು ನನ್ನ ತಂಗಿಯನ್ನು ಅದೇ ದಿನ ತಡರಾತ್ರಿ ಮಂಗಳೂರಿನ ಸರಕಾರಿ ಲೇಡಿಗೋಷನ್‌ ಹೆರಿಗೆ ಆಸ್ಪತ್ರೆಗೆ ಸೇರಿಸಿರುತ್ತೇವೆ. ಅಗಸ್ಟ್ 18 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿರುತ್ತಾಳೆ. ಈ ವೇಳೆ ಆಸ್ಪತ್ರೆಯ ವೈದ್ಯರು ಮಗು ನಾರ್ಮಲ್‌ ಇದೆ ಎಂದು ತಿಳಿಸಿದರು. 3 ದಿನ ಕಳೆದರೂ ಮಗುವನ್ನು ನಮಗೆ ತೋರಿಸಿರುವುದಿಲ್ಲ. ಮಂಗಳವಾರ ಸಂಜೆ ಏಕಾಏಕಿ ಬಂದು ಮಗುವಿಗೆ ಒಂದು ಕಣ್ಣಿಲ್ಲ ಎಂದು ತಿಳಿಸಿರುತ್ತಾರೆ. ಇದರಿಂದ ನಮಗೆ ಆಘಾತವಾಗಿದ್ದು. ಈ ಬಗ್ಗೆ ವೈದ್ಯರು ಹಾಗೂ ಅವರ ಮೇಲಾಧಿಕಾರಿಗಳು ಸೂಕ್ತ ಕಾರಣ ನೀಡದೆ ನುಣುಚಿಕೊಳ್ಳುತ್ತಿದ್ದಾರೆ. ಹಾಗೂ ನಾವು ಅವರಲ್ಲಿ ವೈದ್ಯಕೀಯ ರಿಪೋರ್ಟ್‌ಗಳನ್ನು ಕೇಳುವಾಗಲೂ ಕೊಡದಿರುವುದು ಹಲವಾರು ಸಂಶಯಗಳಿಗೆ ಎಡೆ ಮಾಡಿರುತ್ತದೆ. ನನ್ನ ತಂಗಿಯು ಮಗುವಿಗೆ ಎದೆ. ಹಾಲು ಉಣಿಸಲು 3 ದಿನ ಕಳೆದರೂ ಅವಕಾಶ ನಿರಾಕರಿಸಲಾಗಿದೆ. ನಾವು ಚಿಂತಾಕ್ರಾಂತರಾಗಿದ್ದು, ನನ್ನ ತಂಗಿಗೆ ಹಾಗೂ ಮಗುವಿಗೆ ಅನ್ಯಾಯವಾಗಿದ್ದು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಮತ್ತು ನಮ್ಮ ಕುಟುಂಬಕ್ಕೆ ಹಿರಿಯ ಅಧಿಕಾರಿಗಳು ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದ್ದಾರೆ.

ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತುಳುನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೇಶ್ ಶೆಟ್ಟಿ, ಜಪ್ಪು ಮಾತನಾಡಿ, ಈ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಬೇಕು ವಿಳಂಬವಾದರೆ ತುಳುನಾಡು ರಕ್ಷಣಾ ವೇದಿಕೆ ನೇತೃತ್ವದಲ್ಲಿ ಧರಣಿ ನಡೆಸುವುದಾಗಿ ತಿಳಿಸಿದ್ದಾರೆ

 

 

Related Articles

Back to top button