ಕರಾವಳಿ

ಮಂಗಳೂರಿನಲ್ಲಿ ಮತ್ತೆ ಮತೀಯ ಗೂಂಡಾಗಿರಿ : ಇಬ್ಬರ ಬಂಧನ

Views: 0

ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಮತೀಯ ಗೂಂಡಾಗಿರಿ ನಡೆದಿದ್ದು, ಒಂದೇ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ-ಯುವತಿ ಜೊತೆಯಾಗಿ ಹೋಗುವಾಗ ಹಿಂಬಾಲಿಸಿಕೊಂಡು ಹೋಗಿ ತಡೆದು ಹಲ್ಲೆಗೆ ಮುಂದಾದ ಘಟನೆ ನಡೆದಿದೆ.

ಸೋಮವಾರ ರಾತ್ರಿ 8 ಗಂಟೆಯ ವೇಳೆಗೆ ನಗರದ ಮುಳಿಹಿತ್ಲು ಎಂಬಲ್ಲಿನ ಸ್ಪೋರ್ಟ್ಸ್ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ನೂರುಲ್ಲಾ ಅಮೀನ್ ಮತ್ತು ಸೌಜನ್ಯಾ ಎಂಬವರು ಮೊಬೈಲ್ ರಿಪೇರ್ ಮಾಡಿಸಿಕೊಂಡು ನಗರದ ಮಿಲಾಗ್ರಿಸ್ ಚರ್ಚ್ ಕಡೆಯಿಂದ ಭಗಿನಿ ಸಮಾಜದ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಆರೋಪಿಗಳು ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದು ಇವರನ್ನು ತಡೆದು ನೀವು ಹಿಂದೂ -ಮುಸ್ಲಿಮ್ ಎಲ್ಲಿಗೆ ಹೋಗುತ್ತಿದ್ದೀರಿ? ಎಂದು ನಿಂದಿಸಿ ಗೂಂಡಾಗಿರಿ ನಡೆಸಿದ್ದಾರೆ.

ಈ ವೇಳೆ ಹೊಯ್ಸಳ ವಾಹನದ ಪೊಲೀಸರು ಇಬ್ಬರು ಉದ್ಯೋಗಿಗಳನ್ನು ರಕ್ಷಣೆ ಮಾಡಿ ಪೊಲೀಸ್‌ ಠಾಣೆಗೆ ಕರೆ ತಂದಿದ್ದಾರೆ. ಈ ಕುರಿತು ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 341, 354ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪಾಂಡೇಶ್ವರ ಠಾಣಾ ಪೊಲೀಸರು ಅಕ್ಷಯ್ ರಾವ್ ಮತ್ತು ಶಿಬಿನ್ ಪಡಿಕ್ಕಲ್ ಎಂಬಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

.ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಮಂಗಳೂರಿನಲ್ಲಿ ಮತೀಯ ಗೂಂಡಾಗಿರಿ ಪದೇ ಪದೇ ನಡೆಯುತ್ತಿತ್ತು. ಕಾಂಗ್ರೆಸ್‌ ಸರಕಾರ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಕರಾವಳಿಯಲ್ಲಿ ನಡೆಯುತ್ತಿದ್ದ ಮತೀಯ ಗೂಂಡಾಗಿರಿಗೆ ಬ್ರೇಕ್ ಹಾಕುವುದಾಗಿಯೂ ಹೇಳಿತ್ತು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೂ ಕರಾವಳಿಯಲ್ಲಿ ಮತೀಯ ಗೂಂಡಾಗಿರಿ ಮುಂದುವರಿದಿದೆ.

ಕಳೆದ ಜುಲೈನಲ್ಲಿ ಬಂಟ್ವಾಳದಲ್ಲಿ ಪೊಲೀಸ್ ಮೇಲೆಯೇ ಮತೀಯ ಗೂಂಡಾಗಿರಿ ನಡೆಸಿದ ಘಟನೆ ನಡೆದಿತ್ತು. ಬಿ.ಸಿ.ರೋಡ್ ನಿವಾಸಿಯಾಗಿರುವ ಪೊಲೀಸ್ ಸಿಬ್ಬಂದಿಯೊಬ್ಬರು ತನ್ನ ಪತ್ನಿ ಮತ್ತು ಸಹೊದರಿಯ ಜೊತೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಅವರ ಮೇಲೆ ಗೂಂಡಾಗಿರಿ ನಡೆಸಲಾಗಿತ್ತು. ಇದು ಕರಾವಳಿಯಲ್ಲಿ ಮತೀಯ ಗೂಂಡಾಗಿರಿ ಎಷ್ಟರ ಮಟ್ಟಿಗೆ ಇದೆ ಎಂಬುವುದಕ್ಕೆ ಸ್ಪಷ್ಟವಾದ ಉದಾಹರಣೆಯಾಗಿದೆ.

ಆ.3ರಂದು ಆಟೋದಲ್ಲಿ ಪ್ರಯಾಣಿಕರನ್ನು ಕೂರಿಸಿಕೊಂಡು ಹೋಗುತ್ತಿದ್ದ ಆಟೋ ಚಾಲಕ ಮಹಮ್ಮದ್ ಆಶಿಕ್‌ ಮೇಲೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಕರಾವಳಿಯಲ್ಲಿ ಮತೀಯ ಗೂಂಡಾಗಿರಿಯನ್ನು ಸಂಪೂರ್ಣವಾಗಿ ತಡೆಯುವುದಾಗಿ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ದಿನೇಶ್‌ ಗುಂಡೂರಾವ್‌ ಅವರು ಹೇಳಿದ್ದರು. ಆದರೆ ಕರಾವಳಿಯಲ್ಲಿ ಮತ್ತೆ- ಮತ್ತೆ ಘಟನೆಗಳು ಮರುಕಳಿಸುತ್ತಿದ್ದು, ಟೀಕೆಗೆ ಕಾರಣವಾಗಿದೆ.

Related Articles

Back to top button