ಭಾರತ ರತ್ನ ಎಪಿಜೆ ಅಬ್ದುಲ್ ಕಲಾಂ ರಾಷ್ಟ್ರ ಪ್ರಶಸ್ತಿಗೆ ಪ್ರಸಂಗಕರ್ತ ಡಾ.ಕೆ ಬಸವರಾಜ್ ಶೆಟ್ಟಿಗಾರ್ ಆಯ್ಕೆ

Views: 578
ಕನ್ನಡ ಕರಾವಳಿ ಸುದ್ದಿ: 41 ಸಂವತ್ಸರಗಳಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ವಾಸ್ತು ತಜ್ಞ ಡಾ. ಕೆ ಬಸವರಾಜ್ ಶೆಟ್ಟಿಗಾರ್ ಕೋಟೇಶ್ವರ ಇವರಿಗೆ ಭಾರತ ರತ್ನ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ 2024- 25ರ ರಾಷ್ಟ್ರ ಪ್ರಶಸ್ತಿಯನ್ನು ನೀಡಲು ಆಯ್ಕೆ ಸಮಿತಿ ಆಯ್ಕೆ ಮಾಡಿದ್ದಾರೆಂದು ಅಕಾಡೆಮಿಯ ಅಧ್ಯಕ್ಷ ಡಾ. ಸುದರ್ಶನ್ ಯಾದವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವರಾಜ್ ಶೆಟ್ಟಿಗಾರರು 25 ವರ್ಷಗಳ ಹಿಂದೆ ಕೇರಳದ ಪಯ್ಯನೂರಿನಲ್ಲಿ ಜ್ಯೋತಿಷ್ಯ ಹಾಗೂ ವಾಸ್ತು ಶಾಸ್ತ್ರದ ಬಗ್ಗೆ ಅಧ್ಯಯನ ಮಾಡಿ ಪಾಂಡಿತ್ಯವನ್ನು ಅರ್ಜಿಸಿಕೊಂಡು ಈಗಾಗಲೇ ಗಣಪತಿ ಹೋಮ, ಗ್ರಹ ಪ್ರವೇಶ, ಮದುವೆ, ಸತ್ಯನಾರಾಯಣ ಪೂಜೆ ಹೀಗೆ ಹಲವಾರು ಹೋಮ ಹವನಾದಿಗಳನ್ನು ಮಾಡಿರುವುದೊಂದಿಗೆ ಒಂದು ಲಕ್ಷಕ್ಕೂ ಮಿಕ್ಕಿ ಹೊಸ ಹಾಗೂ ಹಳೆ ಮನೆಯ ವಾಸ್ತು ವಿನ್ಯಾಸವನ್ನು ಮಾಡಿದ್ದು ಲಕ್ಷಾಂತರ ಜಾತಕ ಪರಿಶೀಲನೆ ರಚನೆ ಮಾಡಿರುತ್ತಾರೆ.
ಈಗಾಗಲೇ ದೇಶ ವಿದೇಶದಲ್ಲೆಡೆ ತಮ್ಮ ಪಾಂಡಿತ್ಯವನ್ನು ತೋರ್ಪಡಿಸಿದ ಹೆಮ್ಮೆ ಇವರಿಗಿದೆ. ಅಲ್ಲದೆ ಶೆಟ್ಟಿಗಾರರು ಪ್ರಸಂಗ ಸಾಹಿತ್ಯ, ಪತ್ರಿಕಾ ರಂಗ, ನಾಟಕ ರಂಗ, ಸಾಮಾಜಿಕ ಕ್ಷೇತ್ರ, ಕಲಾ ಕ್ಷೇತ್ರ, ಕೃಷಿ ಕ್ಷೇತ್ರ, ಧಾರ್ಮಿಕ ಕ್ಷೇತ್ರಗಳ ರೂವಾರಿಯಾಗಿ ಹಾಗೂ ಯುವ ಸಂಘಟಕರಾಗಿ 41 ವರ್ಷಗಳಿಂದ 16 ವಿವಿಧ ಕ್ಷೇತ್ರದಲ್ಲಿ ಮಾಡಿದ ಸಾಧನೆ ಹಾಗೂ ವಾಸ್ತು ಕ್ಷೇತ್ರದಲ್ಲಿ ನಿರಂತರ 20 ಸಂವತ್ಸರದ ಸೇವೆ ನೀಡಿರುವುದಕ್ಕಾಗಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಶೆಟ್ಟಿಗಾರರ ಸಾಧನೆಗೆ ಸಂದ ಗೌರವವಾಗಿದೆ.
ಶೆಟ್ಟಿಗಾರರು 68 ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದು, 19 ನಾಟಕಗಳಲ್ಲಿ ಎರಡು ನಾಟಕ ಜಿಲ್ಲಾ ಪ್ರಶಸ್ತಿ ಲಭಿಸಿದೆ. ನಾಲ್ಕು ಕಾದಂಬರಿಗಳನ್ನು ರಚಿಸಿದ ಕಲಾವಿದರಾಗಿ, ನಿರ್ದೇಶಕರಾಗಿ, ತಾಳಮದ್ದಳೆ ಅರ್ಥಧಾರಿಯಾಗಿ ಯಾವುದೇ ವಿಚಾರದಲ್ಲಿ ಅಧಿಕಾರವಾಣಿಯಿಂದ ಮಾತನಾಡುವ ಸಂಪನ್ಮೂಲ ವ್ಯಕ್ತಿಯಾಗಿ 22ಕ್ಕೂ ಮಿಕ್ಕಿ ಸಂಘ ಸಂಸ್ಥೆಗಳನ್ನು ಸ್ಥಾಪಿಸಿದ್ದು, 8 ಸಂಘಟನೆಗಳು ತಮ್ಮ ಬೆಳ್ಳಿ ಹಬ್ಬವನ್ನು ಆಚರಿಸಿ ಸುವರ್ಣ ಮಹೋತ್ಸವದ ಎಡೆಗೆ ಸಾಗುತ್ತಿದೆ.
ಈಗಾಗಲೇ ಅಭಿಮಾನಿಗಳಿಂದ 602 ಸನ್ಮಾನವನ್ನು ಸ್ವೀಕರಿಸಿದ್ದು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸ್ಕಂದ ಪ್ರಶಸ್ತಿ, ಡಾ. ಶಿವರಾಮ ಕಾರಂತ ರಾಜ್ಯ ಪ್ರಶಸ್ತಿ, ಕಲಾ ಸಾಧಕ ಪ್ರಶಸ್ತಿ, ಬಸವ ರತ್ನ ರಾಷ್ಟ್ರ ಪ್ರಶಸ್ತಿ, ವಿಶ್ವ ಮಾನ್ಯ ಕನ್ನಡಿಗ ಅಂತರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಭೂಷಣ, ಭಾರತ ಭೂಷಣ, ವಾಸ್ತು ಕಲಾರತ್ನ ರಾಜ್ಯ ಪ್ರಶಸ್ತಿ, ಬಸವ ರತ್ನ ರಾಷ್ಟ್ರ ಪ್ರಶಸ್ತಿ, ವಿಶ್ವ ಮಾನ್ಯ ಕನ್ನಡಿಗ ಅಂತರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಭೂಷಣ, ಭಾರತ ಭೂಷಣ, ವಾಸ್ತು ಕಲಾರತ್ನ ರಾಜ್ಯಪ್ರಶಸ್ತಿ, ಸಕಲಕಲಾವಲ್ಲಭ, ಡಾ.ರಾಜಕುಮಾರ್ ಪ್ರಶಸ್ತಿ, ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ, ಜೀವಮಾನ ಶ್ರೇಷ್ಠ ಸಾಧಕ ಅಂತರಾಷ್ಟ್ರೀಯ ಪ್ರಶಸ್ತಿಗಳು ಇವರ ಮುಡಿಯೇರಿದೆ.
ಶೆಟ್ಟಿಗಾರರಿಗೆ ಮೌಲ್ಯಾಧಾರಿತ ಕಥಾನಕಗಳ ಸರದಾರ, ಕ್ಷೇತ್ರ ಮಹಾತ್ಮೆಯ ಸರದಾರ, ಸಮಾಜ ರತ್ನ, ಕಲಾ ಕೇಸರಿ, ಧರ್ಮ ದುರಂದರ, ಧ್ವಜಪುರ ರತ್ನ, ಕರುನಾಡ ಕಣ್ಮಣಿ, ಪದ್ಮಶಾಲಿ ಕುಲದೀಪಕ, ಪದ್ಮಶಾಲಿ ಕಣ್ಮಣಿ, ಪದ್ಮಶಾಲಿ ಕುಲ ತಿಲಕ, ಜ್ಯೋತಿಷ್ಯ ಚೂಡಾಮಣಿ, ಕ್ಷೇತ್ರ ಮಹಾತ್ಮೆಗಳ ಕೃತಿ ಬ್ರಹ್ಮ, ಎಂಬಿತ್ಯಾದಿ ಬಿರುದುಗಳು ಪ್ರಾಪ್ತಿಯಾಗಿದೆ. ಇಂತಹ ಬಹುಮುಖ ಪ್ರತಿಭೆಗೆ ಭಾರತ ರತ್ನ ಎಪಿಜೆ ಅಬ್ದುಲ್ ಕಲಾಂ ರಾಷ್ಟ್ರ ಪ್ರಶಸ್ತಿ ಎನ್ನುವಂತಾದದ್ದು ಶೆಟ್ಟಿಗಾರರ ಕೀರ್ತಿ ಕಿರೀಟಕ್ಕೆ ತುರಾಯಿ ಇರಿಸಿದಂತಾಗಿದೆ.
ಅಲ್ಲದೆ ಶೆಟ್ಟಿಗಾರರು ರೇಡಿಯೋ ಮಾಧ್ಯಮದಲ್ಲಿ ವಾರದ ಅತಿಥಿಯಾಗಿ ಚಿಂತನ ಮಾಲಿಕೆಯಲ್ಲಿ ತಮ್ಮ ಅಮೂಲ್ಯ ಪ್ರತಿಭೆಯನ್ನು ವ್ಯಕ್ತಪಡಿಸಿದ್ದು, ಉಡುಪಿ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳ ದೃಶ್ಯ ಮಾಧ್ಯಮಗಳಿಗೆ ಉದ್ಘೋಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಹಲವಾರು ಟಿವಿ ಮಾಧ್ಯಮದಲ್ಲಿ ಇವರ ಸಂದರ್ಶನ ಪ್ರಸಾರವಾಗಿದೆ.
48 ಕ್ಷೇತ್ರಗಳ ಅಧ್ಯಯನ ಮಾಡಿ 48 ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರಸಂಗವನ್ನು ಬರೆದು ರಂಗಕ್ಕೆ ನೀಡಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.