ರಾಜಕೀಯ

ಬೆತ್ತಲೆ ಪ್ರಕರಣ:ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸರ್ಕಾರಕ್ಕೆ ನೋಟಿಸ್

Views: 0

ಬೆಳಗಾವಿ, ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿರುವ ಬೆಳಗಾವಿ ಹೊಸ ವಂಟಮುರಿಯ ಮಹಿಳೆ ಬೆತ್ತಲೆ ಪ್ರಕರಣದ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರಾಜ್ಯಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ 4ವಾರಗಳಲ್ಲಿ ವರದಿ ನೀಡುವಂತೆ ಸೂಚಿಸಿರುವಾಗಲೇ ರಾಷ್ಟ್ರೀಯ ಮಹಿಳಾ ಆಯೋಗದ ತಂಡ ಸಂತ್ರಸ್ಥೆಯನ್ನು ಭೇಟಿ ಮಾಡಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದೆ. ಹಾಗೆಯೇ, ಬಿಜೆಪಿಯ ಮಹಿಳಾ ನಿಯೋಗ ಸಹ ಬೆಳಗಾವಿಗೆ ಆಗಮಿಸಿ ಸಂತ್ರಸ್ಥೆಯನ್ನು ಭೇಟಿ ಮಾಡಿದೆ. ಈ ಘಟನೆಯನ್ನು ಖಂಡಿಸಿ ರಾಜ್ಯ ಬಿಜೆಪಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ.ಬೆಳಗಾವಿಯ ವಂಟಮುರಿಯಲ್ಲಿನ ಮಹಿಳೆಯ ಬೆತ್ತಲೆ ಪ್ರಕರಣ ಬಯಲಾಗುತ್ತಿದ್ದಂತೆಯೇ ರಾಷ್ಟ್ರಮಟ್ಟದಲ್ಲಿ ಈ ಪ್ರಕರಣ ಸುದ್ದಿಯಾಗಿದ್ದು, ಇಂದು ಬೆಳಿಗ್ಗೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಡೆಲಿನಾ ಕೊಂಗಡುಪ್ ನೇತೃತ್ವದ ತಂಡ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ಥೆಯನ್ನು ಭೇಟಿ ಮಾಡಿ ಘಟನೆಯ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡಿತು.

ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಮಹಿಳೆಯನ್ನು ಬೆತ್ತಲುಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ ಪೈಶಾಚಿಕ ಪ್ರಕರಣ ಕುರಿತಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರಾಜ್ಯಸರ್ಕಾರ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದೆ. ಇಂತಹ ಅಮಾನವೀಯ ಘಟನೆಗಳಿಂದ ಮಹಿಳೆಯ ಬದುಕುವ ಹಕ್ಕು ಮತ್ತು ಘನತೆಯನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಆಯೋಗ ಬಿಡುಗಡೆ ಮಾಡಿರುವ ಹೇಳಿಕೆಯನ್ನು ಉಲ್ಲೇಖಿಸಿದೆ.

ಡಿ. 11 ರಂದು ಬೆಳಗಾವಿಯ ಕಾಕತಿ ಗ್ರಾಮದಲ್ಲಿ ಯುವಕನ ತಾಯಿಯನ್ನು ಯುವತಿಯ ಕುಟುಂಬ ಸದಸ್ಯರು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ್ದರು. ಅಷ್ಟೇ ಅಲ್ಲದೆ ಮಹಿಳೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಲಾಗಿತ್ತು. ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ನಡೆದ ಈ ಅಮಾನುಷ ಕೃತ್ಯ ಕುರಿತ ಮಾಧ್ಯಮ ವರದಿಗಳನ್ನಾಧರಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ಕ್ರಮಕ್ಕೆ ಮುಂದಾಗಿದೆ.

ಮಹಿಳೆಯನ್ನು ವಿವಸ್ತ್ರಗೊಳಿಸಿ ಆಕೆಯ ಮೇಲೆ ಹಲ್ಲೆ ನಡೆಸಿರುವುದು ಸಂತ್ರಸ್ಥ ಮಹಿಳೆಯ ಮಾನವ ಹಕ್ಕುಗಳ ಉಲ್ಲಂಘನೆ ಅತ್ಯಂತ ಗಂಭೀರ ವಿಷಯವಾಗಿದ್ದು, ದುರ್ಬಲ ವರ್ಗಗಳನ್ನು ಅದರಲ್ಲೂ ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ರಕ್ಷಿಸುವುದು ರಾಜ್ಯ ಕರ್ತವ್ಯವಾಗಿದೆ ಎಂದು ಆಯೋಗ ತಿಳಿಸಿದೆ.

ಈ ಕುರಿತು ರಾಜ್ಯ ಮುಖ್ಯಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದ್ದು, 4 ವಾರಗಳಲ್ಲಿ ಸಮಗ್ರ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.

ಪ್ರಕರಣ ಕುರಿತಂತೆ ಎಫ್‌ಐಆರ್ ದಾಖಲಾತಿ, ತನಿಖೆಯ ಪ್ರಗತಿ, ಆರೋಪಿಗಳ ಬಂಧನ ಹಾಗೂ ಸಂತ್ರಸ್ಥ ಮಹಿಳೆಗೆ ಪರಿಹಾರ ನೀಡುವ ಹಾಗೂ ರಾಜ್ಯದಲ್ಲಿ ಇಂತಹ ಅಮಾನವೀಯ ಘಟನೆಗಳನ್ನು ತಡೆಗಟ್ಟಲು ಕೈಗೊಂಡ ಕ್ರಮಗಳ ಬಗ್ಗೆಯೂ ಉಲ್ಲೇಖಿಸುವಂತೆ ಆಯೋಗ ತಾಕೀತು ಮಾಡಿದೆ.

ಪ್ರಕರಣ ಕುರಿತು ತನಿಖೆ ನಡೆಸಲು ತ್ವರಿತವಾಗಿ ತನಿಖಾ ತಂಡ ರಚಿಸಬೇಕು. ಪ್ರಕರಣದ ಸತ್ಯಾಸತ್ಯತೆಯನ್ನು ಅರಿಯಲು ಈ ತನಿಖಾ ತಂಡ ವಿಚಾರಣೆ ನಡೆಸಿ ಸಮಗ್ರ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳೆ ವಿವಸ್ತ್ರಗೊಳಿಸಿದ ಪ್ರಕರಣದ ಬಗ್ಗೆ ಸತ್ಯಶೋಧನೆಗಾಗಿ ಕೇಂದ್ರ ಬಿಜೆಪಿಯ ಮಹಿಳಾ ನಿಯೋಗ ಬೆಳಗಾವಿಗೆ ಆಗಮಿಸಿದೆ. ಈ ನಿಯೋಗದಲ್ಲಿ ಬಿಜೆಪಿ ಸಂಸದರಾದ ಬಿಜೆಪಿ ತಂಡ ಬೆಳಗಾವಿಗೆ ಅಗಮಿಸಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಇಂದು ಬೆಳಿಗ್ಗೆ ದೆಹಲಿಯಿಂದ ಬೆಳಗಾವಿಯ ಸಾಂಬ್ರಾ ವಿಮಾನನಿಲ್ದಾಣಕ್ಕೆ ಬಿಜೆಪಿಯ ಸತ್ಯಶೋಧನಾ ಸಮಿತಿ ಆಗಮಿಸಿತು.ಈ ನಿಯೋಗದಲ್ಲಿ ಸಂಸದರಾದ ಅಫ್ರಜಿತಸಾರಂಗಿ, ಸುನಿತಾದುಗ್ಗಲ್, ಲಾಕೆಟ್ ಚಟರ್ಜಿ, ರಂಜಿತಕೋವಿ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಆಶಾಲಾಕ್ರಾ ಇದ್ದು ಇವರುಗಳೂ ಸಹ ಇಂದು ಬೆಳಗಾವಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ಥೆಯ ಆರೋಗ್ಯ ವಿಚಾರಿಸಿ ಆಕೆಗೆ ಆತ್ಮಸ್ಥೈರ್ಯ ತುಂಬಿದರು. ಇದಾದ ನಂತರ ಘಟನಾ ಸ್ಥಳಕ್ಕೂ ಈ ನಿಯೋಗ ತೆರಳಿ ಮಾಹಿತಿ ಸಂಗ್ರಹಿಸಲಿದೆ.

ಮಹಿಳೆಯನ್ನು ವಿವಸ್ತ್ರಗೊಳಿಸಿ ಆಕೆಯನ್ನು ಕಂಬಕ್ಕೆ ಕಟ್ಟಿ ಅಮಾನುಷವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಕತಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿಜಯಕುಮಾರ ಸಿನ್ನೂರ ಅವರನ್ನು ಸಸ್ಪಂಡ್ ಮಾಡಲಾಗಿದೆ. ಈ ಸಂಬಂಧ ಬೆಳಗಾವಿ ನಗರ ಪೊಲೀಸ್ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ ಆದೇಶ ಹೊರಡಿಸಿದ್ದಾರೆ.

ಪ್ರಕರಣ ಕುರಿತಂತೆ ರಾಜ್ಯ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ರಾಜ್ಯಸರ್ಕಾರ ಮತ್ತು ಪೊಲೀಸ್ ಅಧಿಕಾರಿಗಳಿಗೆ ಚಾಟಿ ಬೀಸಿತು. ಇದರ ಬೆನ್ನಲ್ಲೆ ವಂಟಮುರಿ ಸಿಪಿಐ ವಿಜಯಕುಮಾರ ಅವರನ್ನು ಅಮಾನತು ಮಾಡಲಾಗಿದೆ.

ಬೆಳಗಾವಿಯ ಮಹಿಳೆಯ ಬೆತ್ತಲೆ ಪ್ರಕರಣವನ್ನು ಖಂಡಿಸಿ ಬಿಜೆಪಿ ಇಂದು ರಾಜ್ಯಾದ್ಯಂತ ಪ್ರತಿಭಟನಾ ಧರಣಿ ನಡೆಸಿದೆ. ಬೆಂಗಳೂರಿನ ಮೇಖ್ರಿ ವೃತ್ತದಲ್ಲಿ ಸಂಸದ ಸದಾನಂದಗೌಡ, ಬಿಜೆಪಿ ಮುಖಂಡ ಕಟ್ಟಾ ಜಗದೀಶ್ ನೇತೃತ್ವದಲ್ಲಿ ಬಿಜೆಪಿಯ ಮಹಿಳಾಮೋರ್ಚಾ ಕಾರ್ಯಕರ್ತರು ಧರಣಿ ನಡೆಸಿ ಮಹಿಳೆಯ ಮೇಲಿನ ದೌರ್ಜನ್ಯವನ್ನು ಖಂಡಿಸಿತು.

ಬೆಂಗಳೂರು ಅಲ್ಲದೆ ಮೈಸೂರು, ತುಮಕೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಶಿವಮೊಗ್ಗ, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಈ ಘಟನೆಯನ್ನು ಖಂಡಿಸಿ ಪ್ರತಿಭಟನಾ ಧರಣಿ ನಡೆಸಿದರು.

ಘಟನಾ ಸ್ಥಳಕ್ಕೆ ಪೊಲೀಸರು ಬರದಿದ್ದರೆ ನನ್ನನ್ನು ಕೊಂದೇ ಬಿಡುತ್ತಿದ್ದರು ಎಂದು ಸಂತ್ರಸ್ಥೆ ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ ಬಿಜೆಪಿಯ ಸತ್ಯ ಶೋಧನಾ ತಂಡದ ಮುಂದೆ ತನ್ನ ಅಳಲು ತೋಡಿಕೊಂಡರು, ಬೆಳಗಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ಥೆಯನ್ನು ಮಹಿಳಾ ಆಯೋಗದ ಸದಸ್ಯೆ ಡೆನಿಲಾ ಅವರು ಭೇಟಿ ಮಾಡಿದ ಸಂದರ್ಭದಲ್ಲಿ ಸಂತ್ರಸ್ಥ ಮಹಿಳೆ ಪೊಲೀಸರು ಬರದಿದ್ದರೆ ನನ್ನನ್ನು ಕೊಂದೇ ಬಿಡುತ್ತಿದ್ದರು ಎಂದು ಆಳುತ್ತಾ ಹೇಳಿದರು. ಇದೇ ಮಾತನ್ನು ಸಂತ್ರಸ್ಥೆ ಬಿಜೆಪಿ ಸತ್ಯಶೋಧನಾ ತಂಡದ ಮುಂದೆಯೂ ಹೇಳಿದ್ದಾರೆ.

Related Articles

Back to top button
error: Content is protected !!