ಬೆಂಗಳೂರು-ಮಂಗಳೂರು ಉಡುಪಿ, ಕಾರವಾರಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಾಟ
Views: 286
ಕನ್ನಡ ಕರಾವಳಿ ಸುದ್ದಿ: ಕರಾವಳಿ ಕರ್ನಾಟಕದ ರೈಲ್ವೇ ಪ್ರಯಾಣಿಕರ ಹಿತದೃಷ್ಟಿಯಿಂದ ಬೆಂಗಳೂರು-ಮಂಗಳೂರು ಉಡುಪಿ, ಕಾರವಾರಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಾಟ ಸಂಬಂಧ ಘಾಟಿ ಭಾಗದಲ್ಲಿ ವಿದ್ಯುದ್ದೀಕರಣ ಪೂರ್ಣಗೊಂಡ ಅನಂತರ ಕ್ರಮ ವಹಿಸಲಾಗುವುದು ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಹೊಸದಿಲ್ಲಿಯಲ್ಲಿ ರೈಲ್ವೇ ಸಚಿವರನ್ನು ಭೇಟಿಯಾಗಿ ಈ ಸಂಬಂಧ ಮನವಿ ಸಲ್ಲಿಸಿ ಈ ರೈಲ್ವೇ ಮಾರ್ಗದಲ್ಲಿ ವಂದೇ ಭಾರತ್ ಓಡಾಟದ ಆವಶ್ಯಕತೆಯನ್ನು ವಿವರಿಸಿದ್ದರು. ಹಾಸನ, ಸಕಲೇಶಪುರ ಭಾಗದಲ್ಲಿ ವಿದ್ಯುದ್ದೀಕರಣ ಪೂರ್ಣಗೊಳ್ಳುವ ಹಂತದಲ್ಲಿದ್ದು, ಬೆಂಗಳೂರು ಮತ್ತು ಕರಾವಳಿ ಜಿಲ್ಲೆಗಳನ್ನು ವಂದೇ ಭಾರತ್ ಮೂಲಕ ಬೆಸೆಯಲು ಇದು ಸಕಾಲವಾಗಿದೆ. ಎಂದವರು ಮನವಿಯಲ್ಲಿ ತಿಳಿಸಿದ್ದರು.
ಈ ಮನವಿಗೆ ಸ್ಪಂದಿಸಿದ ರೈಲ್ವೇ ಸಚಿವರು ಸಕಲೇಶಪುರ ಘಾಟಿ ಭಾಗದಲ್ಲಿ ರೈಲು ಹಳಿ ವಿದ್ಯುದ್ದೀಕರಣ ಪೂರ್ಣಗೊಂಡ ಅನಂತರ ಬೆಂಗಳೂರಿನಿಂದ ಕಾರವಾರದೊರೆಗಿನ ರೈಲ್ವೇ ಸೇವೆ ಉತ್ತಮಗೊಳಿಸಿ ವಂದೇ ಭಾರತ್ ಪರಿಚಯಿಸುವ ನಿಟ್ಟಿನಲ್ಲಿ ಯೋಚನೆ ನಡೆಸಲಿದ್ದೇವೆ ಎಂದಿದ್ದಾರೆ.






