ಬೆಂಗಳೂರು ಕಂಬಳ ಉದ್ಘಾಟಿಸಿದ ಸಿಎಂ: ತುಳು ರಾಜ್ಯದ 2ನೇ ಬಾಷೆಯನ್ನಾಗಿ ಮಾಡುವುದಾಗಿ ಸಿದ್ದರಾಮಯ್ಯ ಭರವಸೆ!

Views: 0
ಬೆಂಗಳೂರು: ಕಂಬಳ ಸಮಿತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಕರಾವಳಿಯ ಜಾನಪದ ಕ್ರೀಡೆ “ಕಂಬಳ ಉತ್ಸವ” ಹಾಗೂ ತುಳುನಾಡಿನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ನಂತರ ಮಾತನಾಡಿದ ಮುಖ್ಯಮಂತ್ರಿ, ತುಳುವನ್ನು ಎರಡನೇ ಭಾಷೆಯನ್ನಾಗಿ ಮಾಡುವ ಬೇಡಿಕೆಯನ್ನು ಪರಿಶೀಲಿಸುತ್ತೇವೆ ಎಂದು ತಿಳಿಸಿದರು. ಕರಾವಳಿಯ ಲಕ್ಷಾಂತರ ಜನರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇಲ್ಲಿಯೂ ಪ್ರತಿವರ್ಷ ಕಂಬಳ ಮುಂದುವರಿಸುವ ಕೆಲಸ ಮಾಡಿದರೆ ಬೆಂಗಳೂರಿನ ನಿವಾಸಿಗಳಿಗೂ ಮನೋರಂಜನೆಯ ಕ್ರೀಡೆ ಆಗುತ್ತೆ ಎಂದರು.
ಕಂಬಳ ಮತ್ತು ಜಲ್ಲಿಕಟ್ಟು ಕ್ರೀಡೆಗಳನ್ನು ನಿಷೇಧಿಸಲು ಬೇಡಿಕೆ ಇತ್ತು ಆದರೆ ಕಾಂಗ್ರೆಸ್ ಸರ್ಕಾರವು ಈ ಹಿಂದೆಯೂ ಕಂಬಳವನ್ನು ಬೆಂಬಲಿಸಿದೆ. ಈಗ ಕಂಬಳ ಕ್ರೀಡೆ ಪ್ರೋತ್ಸಾಹಿಸಲು ಸರ್ಕಾರ ಒಂದು ಕೋಟಿ ರೂಪಾಯಿ ಘೋಷಣೆ ಮಾಡಿದ್ದು, ತಕ್ಷಣವೇ ಐದು ಲಕ್ಷ ರೂಪಾಯಿ ಬಿಡುಗಡೆ ಮಾಡಲಿದೆ ಎಂದು ಸಿಎಂ ಹೇಳಿದರು.
ಸಮುದಾಯ ಭವನ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ ಅವರು, ಬೆಂಗಳೂರಿನ ಸುತ್ತಮುತ್ತ ಸಿಎ ನಿವೇಶನಗಳನ್ನು ಹುಡುಕುವಂತೆ ಮನವಿ ಮಾಡಿದರು. ಬೆಂಗಳೂರು ಕಂಬಳ ಸಮಿತಿಯು ಅಧಿಕೃತವಾಗಿ ಸಿಎಂಗೆ ಮನವಿ ಪತ್ರವನ್ನು ನೀಡಿ ತುಳುವನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಮಾಡುವಂತೆ ಮನವಿ ಮಾಡಿತು.
ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಕಂಬಳ ಮತ್ತು ಯಕ್ಷಗಾನ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಕಣ್ಣುಗಳು. ಮಂಗಳೂರಲ್ಲಿದ್ದೇನಾ ಅಥವಾ ಬೆಂಗಳೂರಲ್ಲಿದ್ದೇನಾ ಎಂಬ ಸಂಶಯ ಬಂತು. ತುಳು ಭಾಷೆ ರಾಜ್ಯದ ಹೆಚ್ಚುವರಿ ಭಾಷೆಯಾಗಿ ಸೇರ್ಪಡೆ ಮಾಡಬೇಕು. ಈ ಕುರಿತು ಸಿಎಂ ಸಿದ್ದರಾಮಯ್ಯಗೆ ಮನವರಿಕೆ ಮಾಡಿರುವುದಾಗಿ ತಿಳಿಸಿದರು.
ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಂಬಳ ಉದ್ಘಾಟಿಸಿದರು. ಭಾನುವಾರ ಮಧಾಹ್ನದವರೆಗೂ ನಿರಂತರವಾಗಿ ಕಂಬಳ ಕೋಣಗಳ ಓಟದ ಸ್ಪರ್ಧೆ ನಡೆಯಲಿದೆ. ಇತ್ತ ಕಂಬಳ ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನ ಜನ ಅರಮನೆ ಮೈದಾನಕ್ಕೆ ಆಗಮಿಸಿದ್ದಾರೆ. ಬೆಳಿಗ್ಗೆಯಿಂದಲೇ ಒಂದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.