ಬೆಂಗಳೂರು ಕಂಬಳಕ್ಕೆ ತೆರೆ, ಗೆದ್ದವರಾರು? ಇಲ್ಲಿದೆ ಕೂಟದ ಫೈನಲ್ ಫಲಿತಾಂಶ!
ಬೆಂಗಳೂರಿನ ಅರಮನೆ ಅಂಗಳದಲ್ಲಿ ನಡೆದ ಬೆಂಗಳೂರು ಕಂಬಳ-2023ಕ್ಕೆ ಭಾನುವಾರ ಅದ್ಧೂರಿ ತೆರೆ ಬಿತ್ತು. ಕೂಟದಲ್ಲಿ ಸಾವಿರಾರು ಜನರು, ರಾಜಕಾರಣಿಗಳು, ಸಿನಿಮಾ ತಾರೆಯರು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಕೂಟದ ಅಂತಿಮ ಫಲಿತಾಂಶವೂ ಹೊರಬಿದ್ದಿದೆ.

Views: 0
ಬೆಂಗಳೂರು: ತುಳು ಕೂಟದ ವತಿಯಿಂದ ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ಕಂಬಳ ನೋಡಲು ಕರಾವಳಿ ಮೂಲದ ಸಿನಿಮಾ ನಟ, ನಟಿಯರು ಬಂದಿದ್ದರು. ನಟರಾದ ಪೂಜಾ ಹೆಗಡೆ, ರಕ್ಷಿತ್ ಶೆಟ್ಟಿ, ರಮೇಶ್ ಅರವಿಂದ್, ಉಪೇಂದ್ರ ಸೇರಿದಂತೆ ಹಲವರು ಕಂಬಳ ಕಣ್ತುಂಬಿಕೊಂಡರು.
ನಟ ರಮೇಶ್ ಅರವಿಂದ್ ಮಾತನಾಡಿ, “ನಮ್ಮತನ ಎನ್ನುವುದು ನಮ್ಮ ಕಲೆ, ಕ್ರೀಡೆ, ಸಂಸ್ಕೃತಿಗಳಲ್ಲಿ ಅಡಗಿದೆ. ಕ್ರಿಕೆಟ್ನಂತೆ ನಮ್ಮ ಸಾಂಪ್ರದಾಯಿಕ ಕಂಬಳವನ್ನು ಜನಪ್ರಿಯಗೊಳಿಸುವ ಅಗತ್ಯವಿದೆ” ಎಂದರು.”ಕರಾವಳಿ ಕಂಬಳವನ್ನು ನಾನು ಸಾಮಾನ್ಯವಾಗಿ ನೋಡುತ್ತೇನೆ. ಆದರೆ, ಬೆಂಗಳೂರಿನಲ್ಲಿ ಕಂಬಳ ಆಯೋಜನೆ ಮಾಡಿರುವುದು ತುಂಬಾ ಖುಷಿಯಾಗಿದೆ” ಎಂದು ನಟ ರಕ್ಷಿತ್ ಶೆಟ್ಟಿ ಹೇಳಿದರು.
ನಟ ಉಪೇಂದ್ರ ಮಾತನಾಡುತ್ತಾ, “ಕರಾವಳಿ ಭಾಗದ ಸ್ನೇಹಿತರು ತುಂಬಾ ಜನ ಸಿನಿಮಾರಂಗದಲ್ಲೇ ಪರಿಚಯವಾಗಿದ್ದರು. ಹಾಗೆಯೇ ಕರಾವಳಿಯ ಕಂಬಳ ಬೆಂಗಳೂರಲ್ಲಿ ಆಯೋಜನೆ ಮಾಡಿದ್ದರಿಂದ ಎಲ್ಲರನ್ನೂ ಒಟ್ಟಿಗೆ ನೋಡಿ ಖುಷಿಯಾಯಿತು” ಎಂದು ತಿಳಿಸಿದರು.
“ಕಂಬಳ ಎನ್ನುವುದು ನಮ್ಮ ಹೆಮ್ಮೆ. ಇದು ನಮ್ಮ ಕರ್ನಾಟಕ ಮಾತ್ರವಲ್ಲ, ಇಡೀ ಜಗತ್ತನ್ನು ಮುಟ್ಟಬೇಕು. ಮುಂದಿನ ವರ್ಷದಿಂದ ಬೆಂಗಳೂರಿನಲ್ಲಿ ಮತ್ತಷ್ಟು ಅದ್ಧೂರಿಯಾಗಿ ನಡೆಯಲಿ” ಎನ್ನುವುದು ನಟಿ ಪೂಜಾ ಹೆಗಡೆ ಮಾತು
ಇಲ್ಲಿದೆ ಮಾಹಿತಿ ಫೈನಲ್ ಫಲಿತಾಂಶಗಳು-
ಹಿರಿಯ ವಿಭಾಗ:
ನಂದಳಿಕೆ ಶ್ರೀಕಾಂತ್ ಭಟ್ ಅವರ ಕೋಣಗಳಿಗೆ ಮೊದಲ ಸ್ಥಾನ ಲಭಿಸಿದ್ದು, ವಂದಿತ್ ಶೆಟ್ಟಿ ಅವರು ಕೋಣಗಳನ್ನು ಓಡಿಸಿದರು. ಮಾಳ ಆನಂದ ನಿಲಯ ಶೇಖರ್ ಶೆಟ್ಟಿ ಅವರ ಕೋಣಗಳೆದುರು ಜಯ ಗಳಿಸಿ, 16 ಗ್ರಾಂ ಚಿನ್ನ, 1 ಲಕ್ಷ ರೂಪಾಯಿ ಬಹುಮಾನ ಪಡೆದರು. ಎರಡನೇ ಸ್ಥಾನ ಪಡೆದ ಮಾಳ ಕಂಬಳ ಕೋಣಗಳು 8 ಗ್ರಾಂ ಚಿನ್ನ, 50 ಸಾವಿರ ರೂಪಾಯಿ ಬಹುಮಾನದ ಮೊತ್ತ ಪಡೆದುಕೊಂಡಿವೆ.
ಕಿರಿಯರ ವಿಭಾಗದ ಅಂತಿಮ ಫಲಿತಾಂಶ: ಪ್ರಥಮ ಸ್ಥಾನವನ್ನು ಸುರತ್ಕಲ್ ಪಾಂಚಜನ್ಯ ಯೋಗೀಶ್ ಪೂಜಾರಿ ಕೋಣಗಳು ಪಡೆದುಕೊಂಡಿವೆ. 9.24 ಸೆಕೆಂಡ್ನಲ್ಲಿ ಯೋಗೀಶ್ ಪೂಜಾರಿ ಅವರ ಕೋಣಗಳು ಓಟ ಮುಗಿಸಿದವು. ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ ಅವರ ಕೋಣಗಳಿಗೆ ಎರಡನೇ ಸ್ಥಾನ ಲಭಿಸಿದೆ.








