ಬಿಜೆಪಿ ಮುಖಂಡನ ಪುತ್ರನಿಂದ ಯುವತಿಗೆ ಮಗು ಕರುಣಿಸಿದ ಪ್ರಕರಣ: ಹೈಕೋರ್ಟ್ ಷರತ್ತು ಧಿಕ್ಕರಿಸಿದ ಆರೋಪ
Views: 39
ಕನ್ನಡ ಕರಾವಳಿ ಸುದ್ದಿ: ಪ್ರೇಮ ವಿವಾಹದ ಆಮಿಷವೊಡ್ಡಿ ವಿಶ್ವಕರ್ಮ ಸಮಾಜದ ಬಡ ಯುವತಿಯ ಮೇಲೆ ಅತ್ಯಾಚಾರವೆಸಗಿ, ಗರ್ಭವತಿಯನ್ನಾಗಿ ಮಾಡಿ ವಂಚಿಸಿದ ಪ್ರಕರಣದ ಆರೋಪಿ ಕೃಷ್ಣ ಜೆ. ರಾವ್ ಅವರು ಉಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಗಂಭೀರವಾಗಿ ಆರೋಪಿಸಿದೆ.
ಪ್ರಕರಣದ ಹಿನ್ನೆಲೆ: ಪುತ್ತೂರು ಮೂಲದ ವಿಶ್ವಕರ್ಮ ಸಮುದಾಯದ ಬಡ ಯುವತಿಯನ್ನು ಪ್ರೀತಿಸುವುದಾಗಿ ನಂಬಿಸಿದ್ದ ಬಿಜೆಪಿ ಮುಖಂಡನ ಪುತ್ರ ಕೃಷ್ಣ ಜೆ. ರಾವ್, ಮದುವೆಯ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಇದರಿಂದಾಗಿ ಯುವತಿ ಗರ್ಭವತಿಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಸಂಬಂಧ ದಾಖಲಾಗಿದ್ದ ಪ್ರಕರಣದಲ್ಲಿ ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ.
ಏಪ್ರಿಲ್ 24 ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಆರೋಪಿಗೆ ಮಧ್ಯಾಂತರ ತಡೆಯಾಜ್ಞೆ ನೀಡುವಾಗ ಕಟ್ಟುನಿಟ್ಟಿನ ಷರತ್ತು ವಿಧಿಸಿತ್ತು. ಅಂತಿಮ ತೀರ್ಪು ಬರುವವರೆಗೆ ಸಂತ್ರಸ್ತೆ ಮತ್ತು ಮಗುವಿನ ಜೀವನೋಪಾಯಕ್ಕಾಗಿ ಆರೋಪಿ ಪ್ರತಿ ತಿಂಗಳು 75,000 ರೂ. ನೀಡಬೇಕು ಎಂದು ಆದೇಶಿಸಿತ್ತು.
ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಅವರು, “ಆರೋಪಿ ಕೃಷ್ಣ ಜೆ. ರಾವ್ ನ್ಯಾಯಾಲಯಕ್ಕೆ ಗೌರವ ನೀಡುತ್ತಿಲ್ಲ. ಮೇ 1 ರಂದು ನೀಡಬೇಕಾಗಿದ್ದ 75 ಸಾವಿರ ರೂ.ಗಳನ್ನು ಈವರೆಗೆ ನೀಡದೆ ಹೈಕೋರ್ಟ್ ಷರತ್ತನ್ನು ಧಿಕ್ಕರಿಸಿದ್ದಾರೆ. ಸಮುದಾಯದ ಬಡ ಹೆಣ್ಣುಮಗಳಿಗೆ ಮತ್ತು ಮಗುವಿಗೆ ಅನ್ಯಾಯ ಮಾಡುತ್ತಿದ್ದಾರೆ” ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ನೀಲಕಂಠ ಸ್ವಾಮೀಜಿ, ಶ್ರೀ ದೊಡ್ಡೆಂದ್ರ ಸ್ವಾಮೀಜಿ, ಶ್ರೀ ಗಣೇಶ ಸ್ವಾಮೀಜಿ ಸೇರಿದಂತೆ ಸಮುದಾಯದ ಪ್ರಮುಖ ಮುಖಂಡರು ಉಪಸ್ಥಿತರಿದ್ದು, ಸಂತ್ರಸ್ತೆಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.






