ಬಿಗ್‌ಬಾಸ್ ಹಾಗೂ ಕಿರುತೆರೆ ನಟಿಗೆ ಲೈಂಗಿಕ ಕಿರುಕುಳ:ನಕಲಿ ನಿರ್ಮಾಪಕನ ಸೆರೆ

Views: 154
ಕನ್ನಡ ಕರಾವಳಿ ಸುದ್ದಿ: ಸಿನಿಮಾ ಮಾಡುವುದಾಗಿ ನಂಬಿಸಿ ನಟಿಗೆ ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡಿದ ನಕಲಿ ನಿರ್ಮಾಪಕನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.
ಅನ್ನಪೂರ್ಣೇಶ್ವರಿ ನಗರ ನಿವಾಸಿ ಹೇಮಂತ್ ಕುಮಾರ್ (34) ಬಂಧಿತ. ಕಿರುತೆರೆ ನಟಿ ಹಾಗೂ ಬಿಗ್‌ಬಾಸ್ 11ರ ಸ್ಪರ್ಧಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಕಿರುತೆರೆಯಲ್ಲಿ ನಟಿಸುತ್ತಿರುವ ನಟಿಗೆ 2022ರಲ್ಲಿ ನಿರ್ದೇಶಕ, ನಿರ್ಮಾಪಕ ಎಂದು ಹೇಳಿಕೊಂಡು ಪರಿಚಯವಾದ ಆರೋಪಿ, ರಿಚ್ಚಿ ಎಂಬ ಸಿನಿಮಾ ಮಾಡುತ್ತಿದ್ದು, ಅದರಲ್ಲಿ ನೀವು ನಾಯಕಿಯಾಗಿ ನಟಿಸಬೇಕು ಎಂದು ನಟಿಗೆ ಹೇಳಿದ್ದಾನೆ. ಅದಕ್ಕೆ ಒಪ್ಪಿಕೊಂಡು ನಟಿಗೆ 2 ಲಕ್ಷ ರು. ಸಂಭಾವನೆ ನೀಡುತ್ತೇನೆಂದು ಒಪ್ಪಂದ ಮಾಡಿಕೊಂಡಿದ್ದರು. ಮುಂಗಡವಾಗಿ ನಟಿಗೆ 60 ಸಾವಿರ ರು. ಕೊಡಲಾಗಿತ್ತು. ಅದರಂತೆ ಚಿತ್ರೀಕರಣ ಆರಂಭವಾಗಿತ್ತು. ಆದರೆ, ಕಾರಣಾಂತರಗಳಿಂದ ಆರೋಪಿ ಸಿನಿಮಾ ಚಿತ್ರೀಕರಣವನ್ನು ಆರೋಪಿ ಮುಂದೂಡಿದ್ದ. ಬಳಿಕವೂ ಸಿನಿಮಾದಲ್ಲಿ ನಟಿಸುತ್ತಿದ್ದೆ. ಆದರೆ, ಅಶ್ಲೀಲ ಬಟ್ಟೆ ತೊಡಬೇಕು, ಅಶ್ಲೀಲವಾಗಿ ನಟಿಸಬೇಕು ಎಂದು ಒತ್ತಾಯಿಸಿದ್ದ. ಅಲ್ಲದೆ, ಅಸಭ್ಯ ರೀತಿಯಲ್ಲಿ ಸ್ಪರ್ಶಿಸುತ್ತಿದ್ದ. ಒಪ್ಪಂದದ ಅವಧಿ ಮುಗಿದಿದ್ದರಿಂದ ಸಿನಿಮಾ ಚೇಂಬರ್ ಸಮ್ಮುಖದಲ್ಲಿ ಅವಧಿ ವಿಸ್ತರಣೆ ಮಾಡಿದ್ದರಿಂದ ಸಿನಿಮಾ ಪೂರ್ತಿಗೊಳಿಸಿದ್ದೇನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.