ಬಸ್ರೂರು ಹೆಜ್ಜೇನು ದಾಳಿ, ಓರ್ವ ವ್ಯಕ್ತಿ ಸಾವು, ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ

Views: 9
ಕುಂದಾಪುರ: ಬಸ್ರೂರು ಬಸ್ ನಿಲ್ದಾಣದ ಬಳಿ ಹಲವರಿಗೆ ಹೆಜ್ಜೇನು ದಾಳಿ ಮಾಡಿದ್ದು, ಓರ್ವ ವ್ಯಕ್ತಿ ಗಂಭೀರಗೊಂಡು ಚಿಕಿತ್ಸೆಗೆ ಸ್ಪಂದಿಸದೆ ಸಾವನಪ್ಪಿದ ಘಟನೆ ಸಂಭವಿಸಿದೆ.
ಬಸ್ರೂರಿನ ಬಸ್ ನಿಲ್ದಾಣದ ಬಳಿಯ ನಿವಾಸಿ ಜಗಜೀವನ್ (76) ಸಾವನಪ್ಪಿದ ವ್ಯಕ್ತಿ, ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮಂಗಳವಾರ ಸಂಜೆ ಅವರು ಮನೆಯಿಂದ ಬಸ್ರೂರಿನ ಬಸ್ ನಿಲ್ದಾಣದ ಬಳಿ ಬರುವಾಗ ಹೆಜ್ಜೇನುಗಳು ದಾಳಿ ಮಾಡಿ ಕಚ್ಚಿದ್ದರಿಂದ ಗಂಭೀರ ಗಾಯಗೊಂಡ ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದು, ಆದರೆ ಅವರು ಚಿಕಿತ್ಸೆಗೆ ಫಲಕಾರಿಯಾಗದೆ ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
ಈ ಸಂದರ್ಭದಲ್ಲಿ ಹೆಜ್ಜೇನು ಹಲವು ಮಂದಿಗೆ ಕಚ್ಚಿದ್ದು ಅವರೆಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,ಒಬ್ಬರು ಮಾತ್ರ ಗಂಭೀರ ಗಾಯಗೊಂಡಿದ್ದಾರೆ.
ಬಸ್ರೂರು ಬಸ್ ನಿಲ್ದಾಣ ಬಳಿ ಇದ್ದ ಹೆಜ್ಜೇನು ಗೂಡಿಗೆ ಯಾವುದೋ ಪಕ್ಷಿಗಳು ಅಥವಾ ಇನ್ಯಾವುದೋ ರೀತಿಯಲ್ಲಿ ತೊಂದರೆ ಆಗಿದ್ದರಿಂದ ಜೇನು ನೊಣಗಳು ಮೊದಲಿಗೆ ಈ ಮಾರ್ಗದಲ್ಲಿ ಬರುತ್ತಿದ್ದ ಒಬ್ಬರಿಗೆ ದಾಳಿ ನಡೆಸಿದ್ದು ಅವರು ಓಡಿ ಅಲ್ಲಿಂದ ಪಾರಾಗಿದ್ದಾರೆ. ನಂತರ ಅದೇ ದಾರಿಯಲ್ಲಿ ಬರುತ್ತಿದ್ದ ಜಗಜೀವನ್ ಅವರ ಮೇಲೆ ಜೇನು ನೊಣಗಳು ದಾಳಿ ನಡೆಸಿದ್ದರಿಂದ ದಾಳಿಗೆ ಒಳಗಾದ ವ್ಯಕ್ತಿಯ ಮುಖ, ದೇಹ,ಕೈಕಾಲುಗಳೆಲ್ಲ ಊದಿಕೊಂಡು ಗಂಭೀರ ಗಾಯಗೊಂಡಿದ್ದರು.