ಯುವಜನ

ಪ್ರೀತಿಸಿದ ಹುಡುಗಿ ಬೇರೆ ಮದುವೆಗೆ ಫಿಕ್ಸ್, ಆಕ್ರೋಶಗೊಂಡ ಯುವಕ ಯುವತಿಗೆ ಚಾಕುವಿನಿಂದ ಇರಿದು ತಾನೂ ಆತ್ಮಹತ್ಯೆಗೆ ಯತ್ನ!

Views: 78

ಕನ್ನಡ ಕರಾವಳಿ ಸುದ್ದಿ: ಪ್ರೀತಿಸಿದ ಹುಡುಗಿ ಬೇರೆ ಮದುವೆಗೆ ಗ್ರೀನ್ ಸಿಗ್ನಲ್‌ ನೀಡಿದ್ದಕ್ಕೆ ಆಕ್ರೋಶಗೊಂಡ ಯುವಕನೊಬ್ಬ, ಆಕೆಗೆ ಚಾಕುವಿನಿಂದ ಇರಿದು ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಐಟಿ ನಗರಿಯ ವರ್ತೂರಿನಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ನರಸಾಪುರ ಮೂಲದ ನವಾಜ್ ಹಾಗೂ ಪಶ್ಚಿಮ ಬಂಗಾಳದ ನಂದಿನಿ ದಾಸ್ ಗಾಯಗೊಂಡ ದುರ್ದೈವಿಗಳು.

ನವಾಜ್ ಮತ್ತು ನಂದಿನಿ ಕಳೆದ ಮೂರು ವರ್ಷಗಳಿಂದ ಪರಸ್ಪರ ಗಾಢವಾಗಿ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೇಮಕ್ಕೆ ಇಬ್ಬರ ಮನೆಯಲ್ಲೂ ತೀವ್ರ ವಿರೋಧ ವ್ಯಕ್ತವಾಗಿತ್ತು. ಕುಟುಂಬಸ್ಥರ ಒತ್ತಾಯಕ್ಕೆ ಮಣಿದ ಯುವತಿ, ನವಾಜ್‌ನಿಂದ ದೂರ ಸರಿದು ಬೇರೆ ಮದುವೆಯಾಗಲು ಸಮ್ಮತಿಸಿದ್ದಳು. ಈ ವಿಷಯ ತಿಳಿದು ಇಬ್ಬರ ನಡುವೆ ದೊಡ್ಡ ಮಟ್ಟದ ಗಲಾಟೆ ನಡೆದಿತ್ತು.

ಯುವತಿ ಬೇರೆಯವನನ್ನು ವರಿಸುತ್ತಿರುವುದನ್ನು ಸಹಿಸದ ನವಾಜ್, ಆಕೆ ಮನೆಯಲ್ಲಿ ಒಂಟಿಯಾಗಿದ್ದ ಸಮಯ ಸಾಧಿಸಿ ನುಗ್ಗಿದ್ದಾನೆ. ಮಾತಿನ ಚಕಮಕಿ ನಡೆಸಿ, ತನ್ನ ಬಳಿಯಿದ್ದ ಚಾಕುವಿನಿಂದ ನಂದಿನಿಗೆ ಮನಬಂದಂತೆ ಇರಿದಿದ್ದಾನೆ. ಬಳಿಕ ತಾನೂ ಅದೇ ಚಾಕುವಿನಿಂದ ಕುತ್ತಿಗೆಯನ್ನು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಸದ್ಯ ಇಬ್ಬರನ್ನೂ ಸ್ಥಳೀಯರು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ವರ್ತೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

 

Related Articles

Back to top button
error: Content is protected !!