ಇತರೆ

ಸರ್ಕಾರಿ ಕೆಲಸದ ಆಸೆಗಾಗಿ ಹೆತ್ತ ತಾಯಿಯನ್ನೇ ಹತ್ಯೆ ಮಾಡಿಸಿದ ಮಗಳು!

Views: 115

ಕನ್ನಡ ಕರಾವಳಿ ಸುದ್ದಿ: ಸರ್ಕಾರಿ ಕೆಲಸ ಮತ್ತು ಆಸ್ತಿ ತನ್ನದಾಗಿಸಿಕೊಳ್ಳಲು ಮಗಳೇ ತಾಯಿಯನ್ನು ಹತ್ಯೆ ಮಾಡಿಸಿದ ಆಘಾತಕಾರಿ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

ನೀರಜ್ ಶರ್ಮಾ ಮೃತ ಮಹಿಳೆ. ಈಕೆಯ ಮಗಳು ಆಯುಷಿ ಸೇರಿ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ತಾಯಿಯನ್ನು ಕೊಲೆ ಮಾಡುವ ಮೊದಲು ಆಕೆಯ ಮೇಲೆ ಮಾಟಮಂತ್ರ ಕೂಡ ಮಾಡಿಸಿದ್ದೂ ಗೊತ್ತಾಗಿದೆ. ಅದಕ್ಕೆ ಸಂಬಂಧಿಸಿದ ವಸ್ತುಗಳು ಮನೆಯಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆಯ ವೇಳೆ ಆರೋಪಿಗಳು ಆಘಾತಕಾರಿ ಮಾಹಿತಿಯನ್ನು ಬಾಯಿಬಿಟ್ಟಿದ್ದಾರೆ. ಮಹಿಳೆ ನೀರಜ್ ಶರ್ಮಾ ಅವರ ಕೊಲೆಗೆ ಹಲವು ದಿನಗಳಿಂದ ಸಂಚು ರೂಪಿಸುತ್ತಿದ್ದರು. ಒಂದು ತಿಂಗಳ ಹಿಂದೆ, ಆರೋಪಿಗಳು ಭರತ್‌ಪುರದಿಂದ ಥಾರ್ ಎಸ್‌ಯುವಿಯಲ್ಲಿ ಆಕೆಯನ್ನು ಜೈಪುರಕ್ಕೆ ಕರೆತಂದಿದ್ದರು. ಅಲ್ಲಿ ಆಕೆಗೆ ಕಾರು ಗುದ್ದಿಸಿ ಕೊಲ್ಲುವ ಯತ್ನ ವಿಫಲವಾಗಿತ್ತು. ಆ ಬಳಿಕ, ಜುಲೈ 4 ರಂದು, ಪಕ್ಕಾ ಪ್ಲಾನ್ ಮಾಡಿ ಆಕೆಗೆ ಕಾರು ಗುದ್ದಿಸಿ ಹತ್ಯೆ ಮಾಡಲಾಗಿದೆ. ಇದನ್ನು ಅಪಘಾತ ಎಂದು ಬಿಂಬಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಆಯುಷಿ ತನ್ನ ತಂದೆಯ ಸಂಬಂಧಿಗಳು ಹತ್ಯೆಗೆ ಸಹಕಾರ ನೀಡಿದ್ದಾರೆ ಎಂದು ತಿಳಿಸಿದ್ದಾಳೆ. ಅವರಿಂದಲೇ ಬಾಡಿಗೆ ಕೊಲೆಗಾರರನ್ನು ನೇಮಿಸಿಕೊಂಡಿದ್ದರು. ಹತ್ಯೆಗಾಗಿ 7 ಲಕ್ಷ ರೂಪಾಯಿ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಆರೋಪಿ ಮಾಹಿತಿ ನೀಡಿದ್ದಾಳೆ.

ಮೃತ ಮಹಿಳೆ ನೀರಜ್ ಶರ್ಮಾ ಅವರ ಪತಿ ವಿಜಯ್ ಕುಮಾರ್ ಶರ್ಮಾ 1 ವರ್ಷದ ಹಿಂದೆ ನಿಧನರಾಗಿದ್ದರು. ಅವರು ನ್ಯಾಯಾಲಯದಲ್ಲಿ ಎಲ್‌ಡಿಸಿ (ಲೋವರ್ ಡಿವಿಷನ್ ಕ್ಲರ್ಕ್) ಆಗಿ ಕೆಲಸ ಮಾಡುತ್ತಿದ್ದರು. ಪತಿಯ ಮರಣದ ನಂತರ, ಪತ್ನಿ ನೀರಜ್ ಶರ್ಮಾ ಅವರಿಗೆ ಈ ಕೆಲಸ ಅನುಕಂಪದ ಆಧಾರದ ಮೇಲೆ ಸಿಕ್ಕಿತ್ತು. ತಾಯಿ ಮೃತಪಟ್ಟರೆ ಈ ಕೆಲಸ ತನಗೆ ಸಿಗುತ್ತದೆ ಎಂದು ಭಾವಿಸಿದ ಆರೋಪಿ ಪುತ್ರಿ ಆಯುಷಿ ಹತ್ಯೆ ಮಾಡಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

 

Related Articles

Back to top button
error: Content is protected !!