ಇತರೆ

ಶಿಕ್ಷಕಿ ಬೈದಿದ್ದಕ್ಕೆ ಮನನೊಂದು 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ:ಡೆತ್‌ನೋಟ್‌ನಲ್ಲಿ ಏನಿದೆ? 

Views: 482

ಕನ್ನಡ ಕರಾವಳಿ ಸುದ್ದಿ: ಶಾಲೆಯಲ್ಲಿ ಶಿಕ್ಷಕಿ ಬೈದಿದ್ದಕ್ಕೆ ಮನನೊಂದು 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಮರಸೂರು ಮಡಿವಾಳದಲ್ಲಿ ನಡೆದಿದೆ.

ಮರಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಮಧುಶ್ರೀ (14) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಮಧುಶ್ರೀ ಗುರುವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡಿದ್ದಾಳೆ. ಇಂದು ಬೆಳಿಗ್ಗೆ ಪೋಷಕರು ಎದ್ದು ನೋಡಿದಾಗ ಮಗಳ ಆತ್ಮಹತ್ಯೆ ವಿಷಯ ಬೆಳಕಿಗೆ ಬಂದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಡೆತ್‌ನೋಟ್‌ನಲ್ಲಿ ಏನಿದೆ? : ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿನಿ ಮಧುಶ್ರೀ ಡೆತ್‌ನೋಟ್ ಬರೆದಿದ್ದು, ಅದರಲ್ಲಿ ತನ್ನ ನೋವನ್ನು ತೋಡಿಕೊಂಡಿದ್ದಾಳೆ. “ನನಗೆ ಶಾಲೆಯಲ್ಲಿ ನಡೆದ ಘಟನೆ ತುಂಬಾ ನೋವು ತಂದಿದೆ. ನನ್ನ ಮೇಲೆ ಇಲ್ಲಸಲ್ಲದ ಅಪರಾಧವನ್ನು ಹೊರಿಸಿದ್ದಾರೆ. ಈ ಅವಮಾನವನ್ನು ಸಹಿಸಿಕೊಂಡು ನನಗೆ ಬದುಕಲು ಆಗುತ್ತಿಲ್ಲ. ಮನಸ್ಸಿಗೆ ಹೆಚ್ಚು ನೋವಾಗಿದ್ದರಿಂದ ನಾನು ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ನನಗೆ ಈ ಭೂಮಿ ಮೇಲೆ ಬದುಕಲು ಅರ್ಹತೆ ಇಲ್ಲ. ಅಮ್ಮ ಮತ್ತು ಎಲ್ಲರೂ ನನ್ನನ್ನು ಕ್ಷಮಿಸಿ” ಎಂದು ಬರೆದಿದ್ದಾಳೆ.

ಅಲ್ಲದೆ, ತನ್ನ ಕುಟುಂಬದ ಬಗ್ಗೆಯೂ ಬರೆದಿರುವ ಆಕೆ, “ಅಮ್ಮ, ಅಕ್ಕ, ತಂಗಿ ಮತ್ತು ತಮ್ಮ ಯಾರದ್ದೂ ಇದರಲ್ಲಿ ತಪ್ಪಿಲ್ಲ. ನನ್ನ ಅಮ್ಮ, ಅಕ್ಕ, ತಂಗಿ, ತಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ. ನನ್ನ ಅಮ್ಮನನ್ನು ಯಾರೂ ಕೂಡ ಬೈಯ್ಯಬೇಡಿ” ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾಳೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಸೂರ್ಯನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Related Articles

Back to top button
error: Content is protected !!