ಯುವಜನ

ಕಾಲೇಜು ಮುಗಿಸಿ ಮರಳುತ್ತಿದ್ದ ವಿದ್ಯಾರ್ಥಿನಿಗೆ ಚುಡಾಯಿಸಿ, ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ 

Views: 143

ಕನ್ನಡ ಕರಾವಳಿ ಸುದ್ದಿ :ಕಾಲೇಜು ಮುಗಿಸಿ ಮನೆಗೆ ಮರಳುತ್ತಿದ್ದ ವಿದ್ಯಾರ್ಥಿನಿಯನ್ನು ಚುಡಾಯಿಸಿ, ಬಳಿಕ ಆಕೆಯ ಮನೆಗೆ ನುಗ್ಗಿ ಮಡಚುವ ಬ್ಲೇಡ್ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಚಿಂತಾಮಣಿ ನಗರದ ಆಶ್ರಯ ಬಡಾವಣೆಯಲ್ಲಿ ನಡೆದಿದೆ.

ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಬಿ.ಇ.ಪ್ರಥಮ ವರ್ಷದ ವಿದ್ಯಾರ್ಥಿನಿ ಮೇಘನಾ ಎಸ್. ಅವರು ಮೊದಲು ಕೋಲಾರದ ಎಸ್.ಎನ್.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಬಳಿಕ ಚಿಂತಾಮಣಿ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಮೇಘನಾ ಅವರು ನೂತನ ಪ್ರೌಢಶಾಲೆಯಲ್ಲಿ ಡ್ಯಾನ್ಸ್ ಕ್ಲಾಸ್ ಮುಗಿಸಿ ಸಂಜೆ 4.30ರ ಸುಮಾರಿಗೆ ತಮ್ಮ ದ್ವಿಚಕ್ರ ವಾಹನದ ಬಳಿ ತೆರಳುತ್ತಿದ್ದ ವೇಳೆ ಕಾರ್ತಿಕ್ ಹಾಗೂ ವಿನೋದ್ ಎಂಬ ಇಬ್ಬರು ಯುವಕರು “ಮೇಡಂ, ಮೇಡಂ” ಎಂದು ಕರೆದು ಚುಡಾಯಿಸಿದ್ದಾರೆ. ಇದಕ್ಕೆ ಮೇಘನಾ ಅವರು “ನೀವು ಯಾರು?” ಎಂದು ಪ್ರಶ್ನಿಸಿದಾಗ ಆರೋಪಿಗಳು ಅನುಚಿತವಾಗಿ ವರ್ತಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಆತ್ಮರಕ್ಷಣೆಗಾಗಿ ಮೇಘನಾ ಅವರು ಆರೋಪಿಗಳಲ್ಲಿ ಒಬ್ಬನಿಗೆ ಕೆನ್ನೆಗೆ ಹೊಡೆದು ಅಲ್ಲಿಂದ ಮನೆಗೆ ತೆರಳಿದ್ದು, ನಡೆದ ಘಟನೆಯನ್ನು ತಾಯಿಗೆ ತಿಳಿಸಿದ್ದಾರೆ.

ಅದೇ ದಿನ ರಾತ್ರಿ ಸುಮಾರು 8.30ರ ವೇಳೆಗೆ ಕಾರ್ತಿಕ್, ವಿನೋದ್ ಸೇರಿದಂತೆ ಸುಮಾರು 10 ಮಂದಿ ಮೇಘನಾ ಅವರ ಮನೆಗೆ ನುಗ್ಗಿ, “ನಮ್ಮ ಮುಂದೆಯೇ ನಮಗೆ ಹೊಡೆದು ತಳ್ಳುತ್ತೀಯಾ? ನಿನಗೆ ಎಷ್ಟು ಧೈರ್ಯ?” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ವೇಳೆ ಕಾರ್ತಿಕ್ ಎಂಬಾತ ತನ್ನ ಬಳಿ ಇದ್ದ ಮಡಚುವ ಬ್ಲೇಡ್ ಚಾಕುವಿನಿಂದ ಮೇಘನಾ ಅವರ ಹೊಟ್ಟೆಗೆ ಇರಿದು ಗಂಭೀರ ಗಾಯಗೊಳಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ಸಂಬಂಧ ಚಿಂತಾಮಣಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಹಾಗೂ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Related Articles

Back to top button
error: Content is protected !!