ಯುವಜನ

ಬಸ್ ಪ್ರಯಾಣದ ವೇಳೆ ಕಿಟಕಿಯಿಂದ ತಲೆ ಹೊರಹಾಕಿದ ವಿದ್ಯಾರ್ಥಿಯ ರುಂಡ ಕಟ್ ! 

Views: 138

ಕನ್ನಡ ಕರಾವಳಿ ಸುದ್ದಿ: ಬಸ್ ಪ್ರಯಾಣದ ವೇಳೆ ಉಗುಳುವ ಉದ್ದೇಶದಿಂದ ಕಿಟಕಿಯಿಂದ ತಲೆ ಹೊರಹಾಕಿದ ವಿದ್ಯಾರ್ಥಿ ತಲೆಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ರುಂಡ ತುಂಡಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ಸಮೀಪದ ಶೆರೇವಾಡ ಮತ್ತು ಕುಂದಗೋಳದಲ್ಲಿ ನಡೆದಿದೆ.

ಶಿರೂರು ಗ್ರಾಮದ ಪಕ್ಕೀರಯ್ಯ ಚನ್ನಯ್ಯ ಮತ್ತಳ್ಳಿಮಠ (18) ಮೃತಪಟ್ಟ ದುರ್ದೈವಿ. ಈತ ಹುಬ್ಬಳ್ಳಿಯಲ್ಲಿ ಐಟಿಐ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.

ಪಕ್ಕೀರಯ್ಯ ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರ ಕಡೆಗೆ ತೆರಳುತ್ತಿದ್ದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ. ಪ್ರಯಾಣದ ಮಧ್ಯೆ ಉಗುಳುವ ಉದ್ದೇಶದಿಂದ ಬಸ್ಸಿನ ಕಿಟಕಿಯಿಂದ ತನ್ನ ತಲೆಯನ್ನು ಹೊರಗೆ ಹಾಕಿದ್ದಾನೆ. ಇದೇ ವೇಳೆ ಹಿಂದಿನಿಂದ ಅತ್ಯಂತ ವೇಗವಾಗಿ ಬಂದ ಟಿಪ್ಪರ್ ಲಾರಿಯೊಂದು ಬಸ್‌ಗೆ ತೀರಾ ಸಮೀಪವಾಗಿ ಹಾದುಹೋಗಿದೆ.

ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಯುವಕನ ರುಂಡ ತಕ್ಷಣವೇ ತುಂಡಾಗಿ ಕೆಳಗೆ ಬಿದ್ದಿದೆ. ದೇಹ ಮಾತ್ರ ಬಸ್ಸಿನ ಕಿಟಕಿಯ ಒಳಗಡೆಯೇ ಉಳಿದುಕೊಂಡಿದೆ. ಕಣ್ಣೆದುರೇ ನಡೆದ ಈ ಭೀಕರ ಹಾಗೂ ರಕ್ತಸಿಕ್ತ ದೃಶ್ಯವನ್ನು ಕಂಡು ಬಸ್‌ನಲ್ಲಿದ್ದ ಸಹ-ಪ್ರಯಾಣಿಕರು ತೀವ್ರ ಆತಂಕ ಹಾಗೂ ದಿಗ್ಭ್ರಮೆಗೊಂಡಿದ್ದಾರೆ.

ಘಟನೆ ನಡೆದ ತಕ್ಷಣ ಸ್ಥಳಕ್ಕೆ ಕುಂದಗೋಳ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

 

Related Articles

Back to top button
error: Content is protected !!