ಪ್ರಿಯತಮೆ ಮದುವೆಗೆ ನಿರಾಕರಿಸಿದ ಕಾರಣಕ್ಕೆ ವಿದ್ಯುತ್ ಹೈಟೆನ್ಷನ್ ಟವರ್ ಏರಿದ ಯುವಕ!
Views: 27
ಕನ್ನಡ ಕರಾವಳಿ ಸುದ್ದಿ: ಆನೇಕಲ್ ತಾಲೂಕಿನ ಚಿನ್ನಯ್ಯನಪಾಳ್ಯದ ಯುವಕನೊಬ್ಬ ತನ್ನ ಪ್ರೇಮಿ ಮದುವೆಗೆ ನಿರಾಕರಿಸಿದ ಕಾರಣಕ್ಕೆ ಹೈಟೆನ್ಷನ್ ವಿದ್ಯುತ್ ಟವರ್ ಏರಿ ಹೈಡ್ರಾಮಾ ಮಾಡಿದ ಘಟನೆ ನಡೆದಿದೆ.
ಆನೇಕಲ್ ತಾಲೂಕಿನ ಚಿನ್ನಯ್ಯನಪಾಳ್ಯದ ಸೋಮಶೇಖರ್ ಎಂಬಾತನೇ ವಿದ್ಯುತ್ ಕಂಬದ ಮೇಲೇರಿದ ಯುವಕ.
ಕಳೆದ 3 ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದ ಸೋಮಶೇಖರ್ ಮದುವೆ ನಿರಾಕರಿಸಿದ ಲವ್ ಬ್ರೇಕಪ್ ಮಾಡಿಕೊಂಡಿದ್ದಕ್ಕೆ ಮನನೊಂದು ಟವರ್ ಏರಿದ್ದನು. ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಪ್ರೀತಿಸಿದ ಹುಡುಗಿ ಸ್ಥಳಕ್ಕೆ ಬರುವವರೆಗೂ ತಾನು ಯಾವುದೇ ಕಾರಣಕ್ಕೂ ಕೆಳಗೆ ಇಳಿಯುವುದಿಲ್ಲ ಎಂದು ಕಿರುಚಾಡಿದ್ದಾನೆ.
ಬಳಿಕ ಪ್ರೀತಿಸಿದ ಹುಡುಗಿಯನ್ನು ತಾಳಿ, ಅರಿಶಿಣ, ಕುಂಕುಮ ಹಿಡಿದು ಸ್ಥಳಕ್ಕೆ ಕರೆಸಿದ ಆನೇಕಲ್ ಪೊಲೀಸರು ಪೋಷಕರು ಮತ್ತು ಹುಡುಗನ ಹೈಡ್ರಾಮ ಸುಖಾಂತ್ಯಗೊಳಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದರು.
ಕೊನೆಗೆ ಪೊಲೀಸರು ‘ಹುಡುಗಿ ಬಂದಿದ್ದಾಳೆ, ಯಾರು ಏನು ಮಾಡುವುದಿಲ್ಲ, ಗ್ಯಾರಂಟಿ ಕೊಡುತ್ತೇನೆ. ನಿನಗೆ ಹುಡುಗಿ ಜತೆ ಮದುವೆ ಮಾಡಿಸುವ ಜವಬ್ದಾರಿ ನಮ್ಮದು. ನಿನಗೆ ಯಾರು ಏನು ಮಾಡಲ್ಲ, ಕೆಳಗೆ ಬಾ’ ಎಂದು ಹೇಳಿ ಭರವಸೆ ನೀಡಿದರು. ಬಳಿಕ ಯುವಕ ಕೆಳಗೆ ಇಳಿದಿದ್ದು, ಸುಸ್ತಾಗಿರುವ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಸ್ಥಳೀಯ ಮೂಲಗಳ ಪ್ರಕಾರ, ಸೋಮಶೇಖರ್ ಕಳೆದ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ, ಇತ್ತೀಚೆಗೆ ಯುವತಿಯು ಮದುವೆಗೆ ನಿರಾಕರಿಸಿ, ಪ್ರೇಮ ಸಂಬಂಧಕ್ಕೆ ಅಂತ್ಯ ಹಾಡಿದ್ದಳು. ಇದರಿಂದ ತೀವ್ರ ಆಕ್ರೋಶಗೊಂಡ ಸೋಮಶೇಖರ್, ಮೊದಲು ತನ್ನ ಮನೆಯ ಮೇಲ್ಛಾವಣಿಯ ಶೀಟ್‌ಗಳನ್ನು ಒಡೆದು ದಾಂಧಲೆ ನಡೆಸಿದ್ದ. ಬಳಿಕ ಅದೇ ಆಕ್ರೋಶದಲ್ಲಿ ಮನೆ ಸಮೀಪದ ಇದ್ದ ಹೈಟೆನ್ಷನ್ ವಿದ್ಯುತ್ ಟವರ್ ಮೇಲೇರಿದ್ದಾನೆ.






