ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದ ಪತ್ನಿ
Views: 86
ಕನ್ನಡ ಕರಾವಳಿ ಸುದ್ದಿ: ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದ ಪತ್ನಿ ಶವದ ಪಕ್ಕದಲ್ಲೇ ಕುಳಿತು ರಾತ್ರಿಯಿಡೀ ಅಶ್ಲೀಲ ವೀಡಿಯೋ ವೀಕ್ಷಿಸಿದ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಚಿಲುವೂರು ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮಿ ಮಾಧುರಿ ಪತಿಯನ್ನು ಹತ್ಯೆಗೈದ ಪತ್ನಿ. ಲೋಕಂ ಶಿವ ನಾಗರಾಜು ಕೊಲೆಯಾದ ಪತಿ.
ನಾಗರಾಜು ಈರುಳ್ಳಿ ವ್ಯಾಪಾರಿಯಾಗಿದ್ದ. ಅಕ್ರಮ ಸಂಬಂಧ ಹೊಂದಿದ್ದ ಲಕ್ಷ್ಮಿ ಮಾಧುರಿ ಬಿರಿಯಾನಿ ಮಾಡಿ ಅದರಲ್ಲಿ ಮತ್ತು ಬರಿಸುವ ಔಷಧಿ ಮಿಶ್ರಣ ಮಾಡಿ ಗಂಡನಿಗೆ ನೀಡಿದ್ದಳು. ಇದನ್ನು ತಿಂದ ಪತಿ ಗಾಢವಾದ ನಿದ್ರೆಗೆ ಜಾರಿದ್ದಾನೆ.
ರಾತ್ರಿ ಪ್ರಿಯಕರ ಗೋಪಿ ಮಾಧುರಿಯ ಮನೆಗೆ ಬಂದಿದ್ದಾನೆ. ನಿದ್ದೆಯಲ್ಲಿದ್ದ ನಾಗರಾಜು ನನ್ನು ಮಾಧುರಿ ದಿಂಬಿನ ಸಹಾಯದಿಂದ ತನ್ನ ಪತಿಯ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಆತ ಸತ್ತಿದ್ದಾನೆ ಎಂದು ಖಚಿತಪಡಿಸಿಕೊಂಡ ಬಳಿಕ ಗೋಪಿ ಮಾಧುರಿಯನ್ನು ಅಲ್ಲೇ ಬಿಟ್ಟು ಅಲ್ಲಿಂದ ತೆರಳಿದ್ದಾನೆ. ಶವದ ಪಕ್ಕದಲ್ಲೇ ಕುಳಿತಿದ್ದ ಲಕ್ಷ್ಮಿ ಮಾಧುರಿ ರಾತ್ರಿಯೆಲ್ಲಾ ಅಶ್ಲೀಲ ವೀಡಿಯೋ ನೋಡಿಕೊಂಡು ಕಾಲಕಳೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರುದಿನ ಮುಂಜಾನೆ 4 ಗಂಟೆಯ ಸುಮಾರಿಗೆ ಮಾಧುರಿ ನೆರೆಹೊರೆಯವರ ಬಳಿ ತೆರಳಿ ತನ್ನ ಪತಿ ನಾಗರಾಜು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಕಥೆಕಟ್ಟಿದ್ದಾಳೆ. ದಂಪತಿ ಮತ್ತು ಮಾಧುರಿಯ ವಿವಾಹೇತರ ಸಂಬಂಧದ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು ಎಂಬುದನ್ನು ತಿಳಿದಿದ್ದ ನೆರೆಹೊರೆಯವರು ಮತ್ತು ಪರಿಚಯಸ್ಥರು ನಾಗರಾಜು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
ನಾಗರಾಜು ಸ್ನೇಹಿತರು ನಾಗರಾಜು ಕಿವಿಯ ಬಳಿ ರಕ್ತದ ಕಲೆಗಳು ಹಾಗೂ ಆತನ ದೇಹದ ಮೇಲೆ ಕೆಲಗಾಯಗಳನ್ನು ಗಮನಿಸಿ ತಕ್ಷಣ ಆತನ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದರು. ಮರಣೋತ್ತರ ಪರೀಕ್ಷೆಯಲ್ಲಿ ನಾಗರಾಜು ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದ್ದಾನೆ ಎಂದು ದೃಢಪಡಿಸಲಾಯಿತು. ಅಲ್ಲದೇ ನಾಗರಾಜು ಎದೆಯ ಮೂಳೆಗಳಲ್ಲಿ ಮುರಿತಗಳು ಕಂಡುಬಂದಿದ್ದು, ಆತನ ಮೇಲೆ ದೈಹಿಕ ಹಲ್ಲೆಯಾಗಿದೆ ಎಂಬ ಅನುಮಾನಗಳನ್ನು ದೃಢಪಡಿಸಿತು.
ಸದ್ಯ ಪತಿಯನ್ನು ಕೊಂದ ಪತ್ನಿ ಮಾಧುರಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ಸಮಯದಲ್ಲಿ ಮಾಧುರಿ ಅಪರಾಧವನ್ನು ಒಪ್ಪಿಕೊಂಡಿದ್ದು, ಗಂಡನನ್ನು ಕೊಂದ ನಂತರ ಅಶ್ಲೀಲ ವೀಡಿಯೊಗಳನ್ನು ನೋಡುತ್ತಾ ರಾತ್ರಿ ಕಳೆದಿದ್ದಾಗಿ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.






