ಪ್ರಿಯಕರನೊಂದಿಗೆ ಸೇರಿ ಗಂಡನ ಕೊಲೆ ಮಾಡಿ ಹೆಣದ ಪಕ್ಕದಲ್ಲೇ ಮಲಗಿದ ಹೆಂಡತಿ!
Views: 81
ಕನ್ನಡ ಕರಾವಳಿ ಸುದ್ದಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಪ್ರಿಯಕರನೊಂದಿಗೆ ಸೇರಿ ಬರ್ಬರವಾಗಿ ಹತ್ಯೆ ಮಾಡಿದ ಪತ್ನಿಯೊಬ್ಬಳು, ರಾತ್ರಿಯಿಡೀ ಗಂಡನ ಹೆಣದ ಪಕ್ಕದಲ್ಲೇ ತನ್ನಿಬ್ಬರು ಮಕ್ಕಳೊಂದಿಗೆ ಮಲಗಿದ ಅತ್ಯಂತ ಭೀಕರ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ
ಈ ಸಂಬಂಧ ಪೊಲೀಸರು ಆರೋಪಿ ಮಹಿಳೆ ರೂಹಿ, ಆಕೆಯ ಪ್ರಿಯಕರ ಫರ್ಮಾನ್ ಮತ್ತು ಆತನ ಸ್ನೇಹಿತ ಅದ್ನಾನ್ ಎಂಬುವವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ಮೆಹ್ರಾಜ್ ಎಂದು ಗುರುತಿಸಲಾಗಿದ್ದು, ಈತ ವೃತ್ತಿಯಲ್ಲಿ ಮೇಸ್ತ್ರಿಯಾಗಿದ್ದನು. ಈತನ ಪತ್ನಿ ರೂಹಿ ತನ್ನ ಸ್ವಂತ ಸಹೋದರಿಯ ಮೈದುನ ಫರ್ಮಾನ್ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಇವರಿಬ್ಬರೂ ಒಟ್ಟಿಗೆ ಜೀವನ ನಡೆಸಲು ಬಯಸಿದ್ದರು, ಆದರೆ ಮೆಹ್ರಾಜ್ ಈ ಸಂಬಂಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದನು. ಇದೇ ಕಾರಣಕ್ಕೆ ಗಂಡನನ್ನು ದಾರಿಯಿಂದ ತಪ್ಪಿಸಲು ರೂಹಿ ತನ್ನ ಪ್ರಿಯಕರನ ಜೊತೆಗೂಡಿ ಹತ್ಯೆಯ ಸ್ಕೆಚ್ ಹಾಕಿದ್ದಳು.
ಹತ್ಯೆಯ ಸಂಚಿನ ಭಾಗವಾಗಿ ರೂಹಿ ಮೊದಲೇ ಸಂಚು ಹೂಡಿ ಗಂಡನ ಊಟದಲ್ಲಿ ಅರಿವಳಿಕೆ ಮದ್ದನ್ನು ಬೆರೆಸಿದ್ದಳು. ಮೆಹ್ರಾಜ್ ಊಟ ಮಾಡಿ ಪ್ರಜ್ಞೆ ತಪ್ಪಿದ ನಂತರ, ರೂಹಿ ತಡರಾತ್ರಿ ತನ್ನ ಪ್ರಿಯಕರ ಫರ್ಮಾನ್ ಮತ್ತು ಅವನ ಸ್ನೇಹಿತ ಅದ್ನಾನ್‌ನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಮೂವರೂ ಸೇರಿ ಮೆಹ್ರಾಜ್‌ನ ಕಾಲುಗಳನ್ನು ಹಗ್ಗದಿಂದ ಕಟ್ಟಿ, ಹರಿತವಾದ ಚಾಕುವಿನಿಂದ ಆತನ ಗಂಟಲು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಕೊಲೆ ಮಾಡಿದ ನಂತರ ರೂಹಿ ಯಾವುದೇ ಭಯವಿಲ್ಲದೆ, ರಕ್ತಸಿಕ್ತವಾಗಿ ಬಿದ್ದಿದ್ದ ಗಂಡನ ಶವದ ಪಕ್ಕದಲ್ಲೇ ಹಾಸಿಗೆ ಹಾಸಿ ತನ್ನ ಇಬ್ಬರು ಮಕ್ಕಳೊಂದಿಗೆ ರಾತ್ರಿಯಿಡೀ ಮಲಗಿದ್ದಾಳೆ. ಮರುದಿನ ಬೆಳಿಗ್ಗೆ ಮೆಹ್ರಾಜ್ ತಂದೆ ಮಗನ ಮನೆಗೆ ಬಂದಾಗ, ವರಾಂಡದಲ್ಲಿ ಮಗನ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಶವವಾಗಿ ಬಿದ್ದಿರುವುದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಈ ವೇಳೆ ರೂಹಿ ತನ್ನ ಮೇಲೆ ಹಲ್ಲೆ ನಡೆದಿದೆ ಮತ್ತು ಮನೆಯಲ್ಲಿ ದರೋಡೆ ನಡೆದಿದೆ ಎಂದು ಸುಳ್ಳು ಕಥೆ ಕಟ್ಟಿ ನಾಟಕವಾಡಿದ್ದಾಳೆ.
ಆದರೆ ರೂಹಿಯ ವರ್ತನೆಯ ಬಗ್ಗೆ ಮೆಹ್ರಾಜ್ ತಂದೆಗೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ರೂಹಿಯನ್ನು ವಶಕ್ಕೆ ಪಡೆದು ತೀವ್ರವಾಗಿ ವಿಚಾರಣೆ ನಡೆಸಿದಾಗ ಆಕೆಯ ಅಸಲಿ ಬಣ್ಣ ಬಯಲಾಗಿದೆ. ತಾನು ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವುದನ್ನು ಅವಳು ಒಪ್ಪಿಕೊಂಡಿದ್ದಾಳೆ. ಕೊಲೆಗೆ ಬಳಸಿದ ಎರಡು ಚಾಕುಗಳು ಮತ್ತು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.






