ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಮತ್ತೊಬ್ಬ ಆರೋಪಿ ದಿಲ್ಲಿಯಲ್ಲಿ ಬಂಧನ
Views: 60
ಕನ್ನಡ ಕರಾವಳಿ ಸುದ್ದಿ: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನವದೆಹಲಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬಂಧಿಸಿದೆ.
ಆರೋಪಿಗಳಲ್ಲಿ ಒಬ್ಬನಾದ ಕೊಡಾಜೆ ಮೊಹಮ್ಮದ್ ಶರೀಫ್, ಬಹರೇನ್‌ನಿಂದ ಇಲ್ಲಿನ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಬಂಧಿಸಲಾಯಿತು ಎಂದು ಎನ್‌ಐಎ ಪ್ರಕಟಣೆ ತಿಳಿಸಿದೆ. ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಶರೀಫ್ ಪತ್ತೆಗೆ ಎನ್‌ಐಎ ಲುಕ್‌ಔಟ್ ನೋಟಿಸ್ ಹೊರಡಿಸಿತ್ತು.
ಬಂಧಿತನಾಗಿರುವ ಶರೀಫ್ ನಿಷೇಧಿತ ಪಿಎಫ್‌ಐನ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯನಾಗಿದ್ದ. ಉದ್ದೇಶಿತ ಕೊಲೆಗಳಿಗೆ ಸಂಬಂಧಿಸಿದಂತೆ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಇತರರಿಗೆ ಸೂಚನೆ ನೀಡುವ ಜವಾಬ್ದಾರಿ ಈತನದಾಗಿತ್ತು ಎಂದು ಹೇಳಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ 2022ರ ಜುಲೈ 26ರಂದು ಪ್ರವೀಣ್ ನೆಟ್ಟಾರು ಅವರನ್ನು ಇರಿದು ಹತ್ಯೆ ಮಾಡಲಾಗಿತ್ತು.
2022ರ ಆಗಸ್ಟ್ 4ರಂದು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಎನ್‌ಐಎ ಇದುವರೆಗೆ 20 ಆರೋಪಿಗಳನ್ನು ಬಂಧಿಸಿದೆ. ತಲೆಮರೆಸಿಕೊಂಡಿರುವ ಮೂವರು ಸೇರಿದಂತೆ ಒಟ್ಟು 23 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದೆ.