ಪಾಸ್ ಕೊಟ್ಟು ಇಕ್ಕಟ್ಟಿಗೆ ಸಿಲುಕಿದ ಸಂಸದ ಪ್ರತಾಪ್ ಸಿಂಹ, ಮುಗಿಬಿದ್ದ ವಿಪಕ್ಷ

Views: 37
ಬೆಂಗಳೂರು: ಇನ್ನೂ, ಸಂಸತ್ನಲ್ಲಿ ನಡೆದ ದಾಳಿ ಸಂಸದ ಪ್ರತಾಪ್ ಸಿಂಹರಿಗೆ ನುಂಗಲಾರದ ತುತ್ತಾಗಿ ಪರಿಣಿಮಿಸಿದೆ. ಆರೋಪಿಗಳಿಬ್ಬರಿಗೆ ಪಾಸ್ ಕೊಟ್ಟಿದ್ದೇ ಸದ್ಯ ಪ್ರತಾಪ್ ಸಿಂಹರಿಗೆ ಮುಳುವಾಗಿದೆ. ಇದನ್ನೇ ಅಸ್ತ್ರವಾಗಿಸಿಕೊಂಡಿರೋ ವಿಪಕ್ಷಗಳು ಕೇಂದ್ರ ಸರ್ಕಾರ ಮತ್ತು ಪ್ರತಾಪ್ ವಿರುದ್ಧ ಮುಗಿಬಿದ್ದಿವೆ.
ಏನೋ ಸಂಸತ್ ನೋಡ್ಬೇಕು ಅಂದ್ಕೊಂಡಿದ್ದಾರೆಂದು ನಂಬಿ ಪಾಸ್ ಕೊಟ್ಟಿದ್ದ ತಪ್ಪಿಗೆ ಸದ್ಯ ಪ್ರತಾಪ್ ಸಿಂಹ ಇಕ್ಕಟ್ಟಿಗೆ ಸಿಲುಕಿದ್ದಾರೆ. ಕೆಲವರು ಸಂಸದರತ್ತ ಅನುಮಾನದ ದೃಷ್ಟಿ ನೆಟ್ಟಿರೋದಂತೂ ಸುಳ್ಳಲ್ಲ.
ಇನ್ನು, ಘಟನೆ ನಡೆದ ಬೆನ್ನಲ್ಲೇ ಪಾಸ್ ಕೊಟ್ಟಿದ್ದಕ್ಕೆ ಸಂಸದ ಪ್ರತಾಪ್ ಸಿಂಹರತ್ತ ಎಲ್ಲರ ಬೊಟ್ಟು ತಿರುಗುತ್ತಿದ್ದಂತೆ ಸ್ಪೀಕರ್ ಓಂ ಬಿರ್ಲಾ ಸ್ಪಷ್ಟನೆ ಕೇಳಿದರು. ಸ್ಪೀಕರ್ ಸ್ಪಷ್ಟನೆ ಕೇಳ್ತಿದ್ದಂತೆ ಅವರನ್ನು ಭೇಟಿಯಾದ ಪ್ರತಾಪ್ ಆರೋಪಿ ತಂದೆ ನನ್ನ ಕ್ಷೇತ್ರದವರು. ಅವರು ನೂತನ ಸಂಸತ್ ಭವನ ವೀಕ್ಷಣೆಗೆ ವೀಕ್ಷಕರ ಪಾಸ್ ಕೇಳ್ತಿದ್ರು. ನನ್ನ ಪಿಎ ಜೊತೆ ಅವರ ತಂದೆ ಪಾಸ್ ಪಡೆಯಲು ನಿರಂತರವಾಗಿ ಸಂಪರ್ಕದಲ್ಲಿದ್ರು ಎಂದು ಮಾಹಿತಿ ನೀಡಿದ್ದಾರೆ.
ಸಂಸದ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ಕಿಡಿ
ಇದನ್ನೇ ಅಸ್ತ್ರವಾಗಿಸಿಕೊಂಡಿರೋ ಕಾಂಗ್ರೆಸ್ ಇವತ್ತು ಪ್ರತಾಪ್ ಸಿಂಹ ವಿರುದ್ಧ ಬೆಂಗಳೂರಿನ ಕಾಂಗ್ರೆಸ್ ಭವನದಲ್ಲಿ ಪ್ರತಿಭಟನೆ ನಡೆಸಿದೆ. ಸಂಸದರ ಫೋಟೋಗೆ ಬೆಂಕಿ ಹಚ್ಚಿ ಬಂಧಿಸುವಂತೆ ಆಗ್ರಹಿಸಿದೆ. ಬಳಿಕ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆಯುವುದಕ್ಕೆ ಮುಂದಾದ್ರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.
ಪ್ರತಾಪ್ ಸಿಂಹರ ಸಹಕಾರವಿಲ್ಲದೆ ಇದು ಸಾಧ್ಯವೇ?
ಅಷ್ಟೇ ಅಲ್ಲ, ಮೈಸೂರಲ್ಲಿ ಮಾತಾಡಿದ ಕಾಂಗ್ರೆಸ್ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಪ್ರತಾಪ್ ಸಿಂಹರ ಸಹಕಾರವಿಲ್ಲದೆ ಇದು ಸಾಧ್ಯವೇ? ಎಂದು ಪ್ರಶ್ನೆ ಮಾಡಿದ್ರು. ಪ್ರತಾಪ್ ಸಿಂಹರನ್ನು ಸೂಕ್ತ ವಿಚಾರಣೆ ನಡೆಸಬೇಕು, ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ರು.
ಇನ್ನೂ ಇದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಅಂತ ಸಂಸದ ಉಮೇಶ್ ಜಾಧವ್ ಹೇಳಿದ್ದಾರೆ. ನಾವು ಕೂಡ ಎಷ್ಟೋ ಜನರಿಗೆ ಪಾಸ್ ಕೊಟ್ಟಿದ್ದೇವೆ ಎಂದ್ರು. ಈಗ ಎಲ್ಲರ ಟಾರ್ಗೆಟ್ ಪ್ರಧಾನಿ ನರೇಂದ್ರ ಮೋದಿ. ಕ್ಲಿಯರ್ ಕಣ್ಣಿನಿಂದ, ಕ್ಲಿಯರ್ ಮೈಂಡ್ದಿಂದ ನೋಡಬೇಕು ಅಂತ ಹೇಳಿದ್ರು.
ಒಟ್ನಲ್ಲಿ, ನಂಬಿ ಕೆಟ್ರು ಅಂತಾರಲ್ಲ.. ಆ ಮಾತು ಸದ್ಯ ಬಿಜೆಪಿಯ ಸಂಸದ ಪ್ರತಾಪ್ ಸಿಂಹರಿಗೆ ಅನ್ವಯವಾಗ್ತಿದೆ ಅಂದ್ರು ತಪ್ಪಾಗಲ್ಲ.. ವಿಪಕ್ಷಗಳ ಆರೋಪಕ್ಕೆ ತನಿಖೆಯಿಂದಲೇ ಉತ್ತರಸಿಗಬೇಕಿದೆ






