ಕರಾವಳಿ

ಸಂಬಂಧಿಯ ಜೀವ ಉಳಿಸಲು ತನ್ನ ಪ್ರಾಣಾರ್ಪಣೆ ಮಾಡಿಕೊಂಡ ಅಂಗಾಂಗ ದಾನಿ ಅರ್ಚನಾ ಕಾಮತ್!

Views: 807

ಮಂಗಳೂರು: ಸಂಬಂಧಿಯೋರ್ವರಿಗೆ ಲಿವರ್ ದಾನ ಮಾಡಿದ್ದ ಉಪನ್ಯಾಸಕಿ ಅರ್ಚನಾ ಕಾಮತ್ (33) ಅವರು ದಿಡೀರ್ ಅಸ್ಪಸ್ಥಗೊಂಡು ಮೃತಪಟ್ಟಿದ್ದಾರೆ.

ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸಿ ಶಿಕ್ಷಣ ಪ್ರಸಾರ ಮಾಡುತ್ತಾ ಸಾರ್ಥಕ ಬದುಕು ಸಾಗಿಸಿ, ಸಮಾಜ ಸೇವೆಯಲ್ಲಿ ಸಕ್ರೀಯರಾಗಿದ್ದ ಅಂಗಾಂಗ ದಾನಿ ಅರ್ಚನಾ ಕಾಮತ್ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಅಂಗಾಂಗವನ್ನೂ ದಾನ ಮಾಡಿದ್ದಾರೆ. ಆದರೆ, ಅಂಗಾಂಗ ದಾನ ಮಾಡಿದ ನಂತರ ಅವರ ದೇಹಕ್ಕೆ ನಂಜು ತಗುಲಿ ಈಗ ಅವರೇ ಇಹಲೋಕವನ್ನು ತ್ಯಜಿಸಿದ್ದಾರೆ. ಬೇರೊಬ್ಬರ ಜೀವ ಉಳಿಸಲು ಹೋಗಿ, ತಾವೇ ಜೀವ ತೆತ್ತಿರುವ ದಾರುಣ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಬಾಳಿಗೊಂದು ಅರ್ಥಪೂರ್ಣವಾದ ನಿಯಮ ಇರಬೇಕು ಎನ್ನುತ್ತಾ ಸದಾ ಎಲ್ಲರಲ್ಲೂ ಪ್ರೇರಣಾಸ್ಫೂರ್ತಿಯಾಗಿದ್ದ ಸೋದರಿ ಶ್ರೀಮತಿ ಅರ್ಚನಾ ಕಾಮತ್ ರವರು ಮತ್ತೊಂದು ಜೀವವೊಂದನ್ನು ಉಳಿಸುವ ಸಂದರ್ಭದಲ್ಲಿ ತನ್ನ ಉಸಿರನ್ನೇ ನಿಲ್ಲಿಸಿರುವುದು ಅತ್ಯಂತ ನೋವಿನ ಸಂಗತಿ. ಅವರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತಾ ನನ್ನ ಆತ್ಮೀಯರಾದ ಶ್ರೀ ಸಿ.ಎ ಚೇತನ್ ಕಾಮತ್ ರವರ ಕುಟುಂಬ ವರ್ಗಕ್ಕೆ ಹಾಗೂ ಸೋದರಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಣ ಸಂಸ್ಥೆಯ ಎಲ್ಲಾ ವೃಂದಕ್ಕೂ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಭಗವಂತ ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಭಾವಪೂರ್ಣ ಅಶ್ರುತರ್ಪಣಗಳು. ಅಂಗಾಂಗ ದಾನ ಶ್ರೇಷ್ಠ ದಾನ. ಇನ್ನೊಂದು ಜೀವ ಉಳಿಸುವ ಜೀವಸಾರ್ಥಕತೆಯ ಕಾರ್ಯದಲ್ಲಿ ವಿಧಿವಶರಾದ ಶ್ರೀಮತಿ ಅರ್ಚನಾ ಕಾಮತ್ ಅವರ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದೆನು. ನಿಮ್ಮ ನಿಸ್ವಾರ್ಥತೆ ಮತ್ತು ಧೈರ್ಯ ಅಗಲಿದ ಕುಟುಂಬಕ್ಕೆ ಶಕ್ತಿಯಾಗಿ ಬದಲಾಗಲಿ. ಅದರಲ್ಲೂ ಪುಟ್ಟ ಕಂದ ಅಮ್ಮನ ಅಗಲುವಿಕೆಯ ನೋವಿನಿಂದ ಹೊರಬಂದು ‘ನನ್ನಮ್ಮ ಧೈರ್ಯಶಾಲಿಯಾಗಿದ್ದಳೆಂಬ’ ಸ್ಪೂರ್ತಿಯೊಂದಿಗೆ ಬೆಳೆಯಲಿ. ಓಂ ಶಾಂತಿ ಎಂದು ಸಂಸದ ಬ್ರಿಜೇಶ್ ಚೌಟ ಶ್ರದ್ಧಾಂಜಲಿ ಕೋರಿದ್ದಾರೆ.

“ಪರೋಪಕಾರಾರ್ಥಂ ಇದಂ ಶರೀರಂ” ಎನ್ನುವ ವೇದದ ನುಡಿಯನ್ನು ಅಕ್ಷರಶ: ಪಾಲಿಸುವ ಪಥದಲ್ಲಿ ಇನ್ನೊಂದು ಜೀವವನ್ನು ಉಳಿಸುವ ಪ್ರಕ್ರಿಯೆಯಲ್ಲಿರುವಾಗ ತನ್ನ ಪ್ರಾಣವನ್ನೇ ಕಳೆದುಕೊಂಡಿರುವ ಸಹೋದರಿ ಶ್ರೀಮತಿ ಅರ್ಚನಾ ಕಾಮತ್ ಅವರ ಆತ್ಮಕ್ಕೆ ಸದ್ಗತಿ ಕೋರುತ್ತಾ, ಅವರ ಪತಿ, ಆತ್ಮೀಯರಾದ ಶ್ರೀ ಸಿಎ ಚೇತನ್ ಕಾಮತ್ ಹಾಗೂ ಕುಟುಂಬಕ್ಕೆ, ಹಿತೈಷಿಗಳಿಗೆ, ಅವರು ಸೇವೆ ಸಲ್ಲಿಸುತ್ತಿದ್ದ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ವೃಂದಕ್ಕೆ ಈ ದು:ಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್ ಪೋಸ್ಟ್ ಹಂಚಿಕೊಂಡಿದ್ದಾರೆ.

ತನಗಾಗಿ ಬದುಕುವುದು ಜೀವನ ಆದರೆ ಮತ್ತೊಬ್ಬರಿಗಾಗಿ ಮಾಡುವ ತ್ಯಾಗ ಅದು ಅಮರ. ಅಂಗಾಂಗ ದಾನದ ಮೂಲಕ ಸರ್ವ ಶ್ರೇಷ್ಠ ದಾನಿಯಾಗಿ ಇಂದು ನಮ್ಮನ್ನಗಲಿದ ಸಹೋದರಿ ಶ್ರೀಮತಿ ಅರ್ಚನಾ ಕಾಮತ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಕುಟುಂಬದ ಸದಸ್ಯರಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ದಕ್ಷಿಣ ಕನ್ನಡ ಬಿಜೆಪಿ ಯುವ ಮೋರ್ಚಾ ನಾಯಕ ನಂದನ್ ಮಲ್ಯ ಅವರು ಸದ್ಗತಿ ಕೋರಿದ್ದಾರೆ.

ಶ್ರೀಮತಿ ಅರ್ಚನಾ ಕಾಮತ್ ಇನ್ನಿಲ್ಲ. ಅವರ ಆತ್ಮಕ್ಕೆ ಸದ್ಗತಿ ಕೋರುತ್ತಾ, ಅವರ ಪತಿ, ಸಿಎ ಚೇತನ್ ಕಾಮತ್ ಹಾಗೂ ಕುಟುಂಬಕ್ಕೆ, ಹಿತೈಷಿಗಳಿಗೆ, ಅವರು ಸೇವೆ ಸಲ್ಲಿಸುತ್ತಿದ್ದ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ವೃಂದಕ್ಕೆ ಈ ದು:ಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸುವಂತೆ ಪ್ರಾರ್ಥಿಸುತ್ತೇನೆ ಎಂದು ಸಮಾಜ ಸೇವಕಿ ಕಾಂತಿ ಶೆಟ್ಟಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

Related Articles

Back to top button
error: Content is protected !!