ಪತ್ನಿ, ಸಹೋದರಿಯನ್ನು ಗುಂಡಿಕ್ಕಿ ಕೊಂದು ಎಸ್‌ಬಿಐ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ
Views: 13
ಕನ್ನಡ ಕರಾವಳಿ ಸುದ್ದಿ: ಉತ್ತರ ಪ್ರದೇಶದ ಲಖನೌದಲ್ಲಿ ಗುರುವಾರ ಆಘಾತಕಾರಿ ಘಟನೆ ನಡೆದಿದೆ. ಎಸ್‌ಬಿಐ ಬ್ಯಾಂಕ್ ಉದ್ಯೋಗಿಯೊಬ್ಬರು ಬ್ಯಾಂಕ್ ಎದುರಲ್ಲೇ ತನ್ನ ಪತ್ನಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ನಂತರ ಮನೆಗೆ ತೆರಳಿ ಸಹೋದರಿಯನ್ನೂ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಒಂದು ವರ್ಷದಿಂದ ಪತಿ ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ಕೌಟುಂಬಿಕ ಕಲಹವೇ ಹತ್ಯೆಗೆ ಕಾರಣ ಎನ್ನಲಾಗಿದೆ. ಎಸ್‌ಬಿಐ ಉದ್ಯೋಗಿಯಾಗಿದ್ದ ಮಾನಸ್ ವಾಜಪೇಯಿ (38), ಪತ್ನಿ ದಿವ್ಯಾಗೆ ಕರೆ ಮಾಡಿ ಬ್ಯಾಂಕ್ ಹೊರಕ್ಕೆ ಬರುವಂತೆ ತಿಳಿಸಿದ್ದಾರೆ. ಇಬ್ಬರ ನಡುವೆ ಕೆಲ ಕಾಲ ಮಾತುಕತೆ ನಡೆದಿದೆ. ಬಳಿಕ ಪಿಸ್ತೂಲ್ ತೆಗೆದು ಪತ್ನಿ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾನಸ್ ಮತ್ತು ದಿವ್ಯಾ ಸುಮಾರು 12 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ಕಳೆದ 1 ವರ್ಷಕ್ಕೂ ಹೆಚ್ಚು ಸಮಯದಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ದಿವ್ಯಾ ಕಳೆದ ವರ್ಷ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ.






