ಕರಾವಳಿ
ಪಕ್ಕದ ಮನೆಯ ತಡೆ ಗೋಡೆ ಕುಸಿದು ಮನೆಯ ಮೇಲೆ ಬಿದ್ದು ಬಾಲಕ ಸಾವು

Views: 91
ಮಂಗಳೂರು: ಭಾರಿ ಸುರಿದ ಗಾಳಿ ಸಹಿತ ಭಾರೀ ಮಳೆಗೆ ಮನೆಯ ಮೇಲೆ ತಡೆಗೋಡೆ ಕುಸಿದು ಬಿದ್ದು ಓರ್ವ ಬಾಲಕ ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ಮಂಗಳೂರು ನಗರದ ಹೊರವಲಯದ ಜೋಕಟ್ಟೆ ಎಂಬಲ್ಲಿ ನಡೆದಿದೆ. ಮುಲ್ಕಿ ಕೊಲ್ನಾಡು ಲಿಂಗಪ್ಪಯ್ಯ ಕಾಡು ನಿವಾಸಿ ಶೈಲೇಶ್(17) ಮೃತಪಟ್ಟಿದ್ದಾರೆ.
ಜೋಕಟ್ಟೆಯಲ್ಲಿರುವ ಸಂಬಂಧಿಕರ ಮನೆಗೆ ಶೈಲೇಶ್ ಅತಿಥಿಯಾಗಿ ಬಂದಿದ್ದರು. ರಾತ್ರಿ ಮನೆಮಂದಿ ಊಟ ಮುಗಿಸಿ ಮಲಗಿದ್ದಾರೆ. ನಂತರ ಭಾರೀ ಗಾಳಿಸಹಿತ ಭಾರೀ ಮಳೆ ಸುರಿದಿದೆ. ಪಕ್ಕದ ಮನೆಯ ತಡೆಗೋಡೆ ಇವರ ಮನೆ ಮೇಲೆ ಕುಸಿದು ಬಿದ್ದಿದೆ. ಪರಿಣಾಮ ಮನೆ ಸಂಪೂರ್ಣ ಕುಸಿದಿದೆ. ಮಣ್ಣಿನಡಿ ಸಿಲುಕಿ ಶೈಲೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪಾಂಡೇಶ್ವರ ಮತ್ತು ಕದ್ರಿ ಅಗ್ನಿ ಶಾಮಕದಳ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ನಡೆಸಿ ಮೃತದೇಹ ಹೊರತೆಗೆದಿದ್ದಾರೆ. ಅಪಾಯದಲ್ಲಿದ್ದ ನಾಲ್ವರನ್ನು ರಕ್ಷಿಸಲಾಗಿದೆ.