ನಿರ್ಮಾಪಕರಿಂದ ಆದ ಕೆಟ್ಟ ಅನುಭವ ವಿವರಿಸಿದ ಕಿರುತೆರೆ ನಟಿ

Views: 114
ಹಿಂದಿ ಕಿರುತೆರೆ ನಟಿ ಕೃಷ್ಣಾ ಮುಖರ್ಜಿ ಅವರು ನಿರ್ಮಾಪಕರಿಂದ ಆದ ಕೆಟ್ಟ ಅನುಭವ ವಿವರಿಸಿದ್ದಾರೆ. ‘ಯೇ ಹೇ ಮೊಹಾಬತೇ’ ಧಾರಾವಾಹಿ ಮೂಲಕ ಫೇಮಸ್ ಆದ ಅವರಿಗೆ ಈಗ ದೊಡ್ಡ ಮಟ್ಟದ ಕಿರುಕುಳ ಆಗಿದೆ. ಜೊತೆಗೆ ಧಾರಾವಾಹಿಯಲ್ಲಿ ನಟಿಸಿದ್ದಕ್ಕೆ ಅವರಿಗೆ ಹಣ ಕೂಡ ಸಿಕ್ಕಿಲ್ಲ. ಇದರಿಂದ ಅವರು ಬೇಸರ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.
‘ಶುಭ ಶಗುನ್’ ಹೆಸರಿನ ಧಾರಾವಾಹಿಯಲ್ಲಿ ಕೃಷ್ಣಾ ನಟಿಸುತ್ತಿದ್ದರು. ಇದರಿಂದ ಅವರು ಹೊರ ಬಂದಿದ್ದಾರೆ. ಇದಕ್ಕೆ ಕಾರಣ ಧಾರಾವಾಹಿ ನಿರ್ಮಾಪಕ ಕುಂದನ್ ಸಿಂಗ್ ಅವರು ನೀಡಿದ ಕಿರುಕುಳ. ‘ಇದನ್ನು ಬರೆಯುವಾಗ ನನ್ನ ಕೈಗಳು ನಡುಗುತ್ತಿವೆ. ಆದರೂ ನಾನು ಬರೆಯಲೇಬೇಕು. ನಾನು ಇವರಿಂದ ಖಿನ್ನತೆಗೆ ಒಳಗಾಗಿದ್ದೇನೆ. ನಾವು ನಮ್ಮ ಭಾವನೆಗಳನ್ನು ಹಿಡಿದಿಟ್ಟು, ನಮ್ಮ ಒಳ್ಳೆಯ ಜೀವನವನ್ನು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ತೋರಿಸುತ್ತೇವೆ. ಆದರೆ, ಇದು ರಿಯಾಲಿಟಿ’ ಎಂದು ಅವರು ಬರೆದುಕೊಂಡಿದ್ದಾರೆ.
‘ನನಗೆ ಇನ್ನಷ್ಟು ಹಾನಿ ಆಗಬಹುದು ಎನ್ನುವ ಕಾರಣಕ್ಕೆ ಕುಟುಂಬದವರು ಈ ಬಗ್ಗೆ ಪೋಸ್ಟ್ ಮಾಡೋದು ಬೇಡ ಎಂದರು. ನಾನೇಕೆ ಹೆದರಬೇಕು? ನ್ಯಾಯ ಪಡೆಯೋದು ನನ್ನ ಹಕ್ಕು’ ಎಂದು ಕುಂದನ್ ಸಿಂಗ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
‘ಪ್ರೊಡಕ್ಷನ್ ಹೌಸ್ ಹಾಗೂ ನಿರ್ಮಾಪಕ ಕುಂದನ್ ಸಿಂಗ್ ಅವರು ನನಗೆ ಕಿರುಕುಳ ನೀಡಿದ್ದಾರೆ. ನನಗೆ ಅಂದು ಅನಾರೋಗ್ಯ ಆಗಿತ್ತು. ಜೊತೆಗೆ ಅವರು ಸಂಭಾವನೆಯನ್ನೂ ಕೊಡುತ್ತಿರಲಿಲ್ಲ. ಹೀಗಾಗಿ ನಾನು ಶೂಟ್ ಮಾಡಲ್ಲ ಎಂದೆ. ಇದಕ್ಕಾಗಿ ಅವರು ಮೇಕಪ್ ರೂಂನಲ್ಲಿ ನನ್ನನ್ನು ಲಾಕ್ ಮಾಡಿದ್ದರು. ನಾನು ಬಟ್ಟೆ ಬದಲಿಸುವಾಗ ಬಾಗಿಲು ಮುರಿಯುವ ರೀತಿಯಲ್ಲಿ ಬಾಗಿಲು ಬಡಿಯುತ್ತಿದ್ದರು’ ಎಂದು ದುಃಖ ತೋಡಿಕೊಂಡಿದ್ದಾರೆ.






