ರಾಜಕೀಯ

ನಿರುದ್ಯೋಗಿಗಳ ಖಾತೆಗೆ ಹಣ ವರ್ಗಾವಣೆ  ಮೂಲಕ ಶಿವಮೊಗ್ಗದಲ್ಲಿ ಯುವನಿಧಿ ಯೋಜನೆಗೆ ಚಾಲನೆ

Views: 23

ಶಿವಮೊಗ್ಗ, ರಾಜ್ಯ ಸರ್ಕಾರದ ಮಹತ್ವದ 5 ನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆ ಸ್ವಾಮಿ ವಿವೇಕಾನಂದರ ಜಯಂತಿ ದಿನವಾದ ಇಂದಿನಿಂದ ಜಾರಿಗೆ ಬಂದಿದೆ.ಶಿವಮೊಗ್ಗ ನಗರದಲ್ಲಿಂದು ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ನಿರುದ್ಯೋಗಿಗಳ ಖಾತೆಗೆ ಹಣ ವರ್ಗಾವಣೆ ಮಾಡುವ ಮೂಲಕ ಯುವನಿಧಿ ಯೋಜನೆಗೆ ಚಾಲನೆ ನೀಡಿದರು.

ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳ ಜಾರಿ ಭರವಸೆಯಂತೆ ಯುವನಿಧಿ ಯೋಜನೆಯ ಜಾರಿ ಮೂಲಕ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದಂತಾಗಿದೆ.ಯುವನಿಧಿ ಯೋಜನೆಗೆ ಕಳೆದ ತಿಂಗಳೇ ನೋಂದಣಿ ಆರಂಭವಾಗಿತ್ತು. ಆನ್‌ಲೈನ್ ಮೂಲಕ ಇದುವರೆಗೂ 65 ಸಾವಿರಕ್ಕೂ ಹೆಚ್ಚು ನಿರುದ್ಯೋಗಿಗಳು ನೋಂದಣಿ ಮಾಡಿಕೊಡಿದ್ದು ಇವರುಗಳ ಖಾತೆಗೆ ಈ ತಿಂಗಳಿನಿಂದ ಹಣ ಜಮಾ ಆಗಲಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಯುವನಿಧಿ ಯೋಜನೆಗೆ ಚಾಲನೆ ನೀಡಿ, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದೆ ಎಂದು ಹೇಳಿದರು ಈ ಯುವನಿಧಿ ಯೋಜನೆಯಡಿ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3 ಸಾವಿರ ರೂ., ಡಿಪ್ಲೋಮೋ ಓದಿರುವ ನಿರುದ್ಯೋಗಿಗಳಿಗೆ ಮಾಸಿಕಿ 1500ರೂ. ನಿರುದ್ಯೋಗ ಭತ್ಯೆ ಸಿಗಲಿದೆ.ಈ ಯೋಜನೆಯ ಫಲಾನುಭವಿಗಳಿಗೆ ಉದ್ಯೋಗ ಸಿಗುವವರೆಗೂ ಅಥವಾ ಗರಿಷ್ಠ 2 ವರ್ಷದವರೆಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ಸಿಗಲಿದೆ.

ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವೈದ್ಯಕೀಯ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್, ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೇರಿದಂತೆ ಹಲವು ಸಚಿವರು, ಗಣ್ಯರು ಉಪಸ್ಥಿತರಿದ್ದರು.

ಯುವನಿಧಿ ಯೋಜನೆಯ ಅನುಷ್ಠಾನ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂದಿತ್ತು.ಶಿವಮೊಗ್ಗ ನಗರದ ಫ್ರೀಂಡಪಾರ್ಕ್ ಆವರಣದಲ್ಲಿ ನಡೆದ ಈ ಸಮಾರಂಭದಲ್ಲಿ ಸಾವಿರಾರು ಜನ ಭಾಗಿಯಾಗಿದ್ದು, ಸಮಾರಂಭದ ಸ್ಥಳ ಜನರಿಂದ ತುಂಬಿ ತುಳುಕುತ್ತಿತ್ತು. ಬೆಳಗ್ಗೆ 11.30ಕ್ಕೆ ಆರಂಭವಾಗಬೇಕಾಗಿದ್ದ ಸಮಾರಂಭ ಸಿಎಂ ಆಗಮನ ವಿಳಂಬವಾದ ಕಾರಣ ಮಧ್ಯಾಹ್ನ 1 ಗಂಟೆಯ ನಂತರ ಕಾರ್ಯಕ್ರಮ ಆರಂಭವಾಯಿತು.

ಸಮಾರಂಭಕ್ಕೆ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಉಡುಪಿ ಹಾಗೂ ಹಾವೇರಿ ಜಿಲ್ಲೆಗಳಿಂದ ಹೆಚ್ಚನ ಫಲಾನುಭವಿಗಳು ಆಗಮಿಸಿದ್ದರು

ಫಲಾನುಭವಿಗಳು ಕಾರ್ಯಕ್ರಮಕ್ಕೆ ಕರೆ ತರಲು ಪ್ರತಿ ಜಿಲ್ಲೆಯಲ್ಲೂ ವಾಹನ ವ್ಯವಸ್ಥೆ ಮಾಡಲಾಗಿತ್ತು. ಬಂದವರಿಗೆ ಕುಡಿಯುವ ನೀರು, ಭೋಜನದ ವ್ಯವಸ್ಥೆ ಮಾಡಲಾಗಿತ್ತು.

Related Articles

Back to top button
error: Content is protected !!