ನಟಿ ಅಪರ್ಣಾ ಸಾವಿಗೆ ಪತಿಯೇ ಕಾರಣ: ಸಹೋದರಿ ಹೇಳಿಕೆ ದಾಖಲು

Views: 1
ಎರಡು ದಿನಗಳ ಹಿಂದೆಯಷ್ಟೇ ಮಲಯಾಳಂ ಖ್ಯಾತ ನಟಿ ಅಪರ್ಣಾ ನಾಯರ್ ನೇಣಿಗೆ ಶರಣಾಗಿದ್ದರು. ಅಸಹಜ ಸಾವು ಎಂದು ಘೋಷಿಸಿದ್ದ ಪೊಲೀಸರು ತೀವ್ರಗತಿಯಲ್ಲಿ ವಿಚಾರಣೆ ನಡೆಸಿದ್ದರು. ಇದೀಗ ಅವರ ಸಾವಿಗೆ ಕಾರಣ ಬಯಲಾಗಿದ್ದು, ಈ ವಿಷಯವನ್ನು ಅಪರ್ಣಾ ಅವರ ಸಹೋದರಿಯೇ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಅದರಂತೆ ಎಫ್.ಐ. ಆರ್ ಕೂಡ ದಾಖಲಾಗಿದೆ.
ಅಪರ್ಣಾ ಅವರ ಪತಿಯ ಕುಡಿತವೇ ಸಾವಿಗೆ ಕಾರಣವೆಂದು ಎಫ್.ಐ.ಆರ್ ನಲ್ಲಿ ದಾಖಲಾಗಿದ್ದು, ಗಂಡನ ಕುಡಿತದ ಚಟಕ್ಕೆ ಅಪರ್ಣಾ ಬೇಸತ್ತು ಹೋಗಿದ್ದರಿಂದ, ಈ ವಿಚಾರವನ್ನು ಹಲವಾರು ಬಾರಿ ತಮ್ಮ ತಾಯಿಯ ಜೊತೆ ಹಂಚಿಕೊಂಡಿದ್ದರಂತೆ. ಸಾವಿಗೂ ಎರಡು ಗಂಟೆ ಮುಂಚೆ ತಾಯಿಗೆ ಕರೆ ಮಾಡಿ, ತನ್ನ ನೋವನ್ನು ಹೇಳಿಕೊಂಡಿದ್ದರು ಎಂದು ಅಪರ್ಣಾ ಸಹೋದರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಪರ್ಣಾ ಸಹೋದರಿ ನೀಡಿದ್ದ ಹೇಳಿಕೆಯ ಆಧಾರದಲ್ಲಿ ಇದೀಗ ಎಫ್.ಐ.ಆರ್ ದಾಖಲಾಗಿದೆ
ಆಗಸ್ಟ್ 31ರ ಸಂಜೆ 7.30ರ ಹೊತ್ತಿಗೆ ಅಪರ್ಣಾ ಅವರ ದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡು ಬಂದಿತ್ತು. ಅವರ ತಾಯಿ ಮತ್ತು ಸಹೋದರಿ ಕೂಡಲೇ ಅಪರ್ಣಾ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆಸ್ಪತ್ರೆ ತಲುಪುವುದರ ಹೊತ್ತಿಗೆ ಅಪರ್ಣಾ ಉಸಿರು ಚೆಲ್ಲಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದರು.

ತಿರುವನಂತಪುರಂ ನಿವಾಸದಲ್ಲಿ ಪತಿ, ಇಬ್ಬರು ಮಕ್ಕಳೊಂದಿಗೆ ಅಪರ್ಣಾ ವಾಸಿಸುತ್ತಿದ್ದರು. ಕೇವಲ 31ನೇ ವಯಸ್ಸಿನಲ್ಲೇ ಕುಟುಂಬ ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ ಈ ನಟಿ. ಸಿನಿಮಾ ಮತ್ತು ಕಿರುತೆರೆಯಲ್ಲಿ ಸಕ್ರಿಯರಾಗಿದ್ದ ಅಪರ್ಣಾ ಸಾಕಷ್ಟು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನಟಿಯ ಅಗಲಿಕೆಗೆ ಕೇರಳ ಸಿನಿಮಾ ಮತ್ತು ಟಿವಿ ಉದ್ಯಮ ಕಂಬನಿ ಮಿಡಿದಿದೆ.






