ನಗರಾಭಿವೃದ್ಧಿ ಖಾತೆಗೆ ಪಟ್ಟು ಹಿಡಿದು ರಾಜೀನಾಮೆಗೆ ಮುಂದಾದ ರಾಮಲಿಂಗಾ ರೆಡ್ಡಿ!
Views: 27
ಕನ್ನಡ ಕರಾವಳಿ ಸುದ್ದಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಖಾತೆಯ ಕ್ಯಾತೆ ಉಂಟಾಗಿದೆ. ಇಂಥದ್ದೇ ಖಾತೆ ಬೇಕೆಂದು ಸಚಿವರುಗಳು ಪಟ್ಟು ಹಿಡಿದಿದ್ದು ಬಿಕ್ಕಟ್ಟು ತಲೆದೋರಿದೆ. ಸಚಿವ ರಾಮಲಿಂಗಾರೆಡ್ಡಿ ಅವರು ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಪಟ್ಟು ಹಿಡಿದಿದ್ದು, ಇಲ್ಲವಾದರೆ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇಂದು 13 ಸಚಿವರಿಗೆ ಖಾತೆ ಹಂಚಿಕೆ ಮಾಡುವುದಾಗಿ ಸಿಎಂ ತಿಳಿಸಿದ್ದರು. ಆದರೆ, ಖಾತೆ ಸಮಸ್ಯೆ ಉಲ್ಬಣಿಸಿದ್ದು, ಖಾತೆ ಹಂಚಿಕೆ ತೀರ್ಮಾನ ವಿಳಂಬವಾಗುತ್ತಿದೆ. ಈ ಸಂಬಂಧ ಸಿಎಂ ಡಿಕೆಶಿ ಮಾಜಿ ಸಿಎಂ ಸಿದ್ದರಾಮಯ್ಯನವರೊಂದಿಗೆ ಸಭೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಪಟ್ಟು ಹಿಡಿದಿದ್ದು, ಅವರಿಗೆ ಜಲಸಂಪನ್ಮೂಲ ಇಲಾಖೆ ನೀಡಲು ತೀರ್ಮಾನಿಸಲಾಗಿದೆ. ಆದರೆ, ಇದಕ್ಕೆ ಒಲ್ಲದ ರೆಡ್ಡಿ ತನಗೆ ಬೆಂಗಳೂರು ನಗರಾಭಿವೃದ್ಧಿ ಖಾತೆಯೇ ಬೇಕು ಎಂದು ಒತ್ತಾಯಿಸಿದ್ದಾರೆ. ಜಲಸಂಪನ್ಮೂಲ ಖಾತೆ ನೀಡಿದರೆ ಅದನ್ನು ನಿಭಾಯಿಸುವುದು, ಪ್ರವಾಸ ಮಾಡುವುದು ಕಷ್ಟವಾಗುತ್ತದೆ. ಹಾಗಾಗಿ, ಬೆಂಗಳೂರು ನಗರಾಭಿವೃದ್ಧಿ ಖಾತೆ ಬೇಕು. ಈ ಖಾತೆ ಕೊಡುವುದಾಗಿ 2023ರಲ್ಲೇ ಡಿಕೆಶಿ ಭರವಸೆ ನೀಡಿದ್ದರು. ಅದರಂತೆ ಇದೇ ಖಾತೆಯೇ ನೀಡಬೇಕು. ಇಲ್ಲವಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸ್ಪಷ್ಟ ನಿಲುವು ತಿಳಿಸಿದ್ದಾರೆ ಎಂದು ಹೇಳಲಾಗಿದೆ.






