ದೇವೇಗೌಡರ ಜಾಗಕ್ಕೆ ನೂತನ ರಾಷ್ಟ್ರಾಧ್ಯಕ್ಷರನ್ನು ನೇಮಕ ಮಾಡಿದ ಇಬ್ರಾಹಿಂ ಬಣ; ತೆನೆ ಹೊತ್ತ ಮಹಿಳೆಯ ಚಿಹ್ನೆ ಯಾರ ಪಾಲಾಗುತ್ತೆ?

Views: 2
ಬೆಂಗಳೂರು: ಬಿಜೆಪಿ ಜೊತೆ ಸ್ನೇಹದ ಹಸ್ತ ಚಾಚಿರೋ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಜೆಡಿಎಸ್ ಪಕ್ಷದಲ್ಲಿ ಹೊಸ ಕೋಲಾಹಲ ಎದ್ದಿದೆ. ಉಚ್ಛಾಟಿತ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅವರು ದೇವೇಗೌಡರ ಜೆಡಿಎಸ್‌ಗೆ ಸೆಡ್ಡು ಹೊಡೆದು ಮಹತ್ವದ ಹೋರಾಟಕ್ಕೆ ಮುನ್ನುಡಿ ಬರೆದಿದ್ದಾರೆ.

ನಗರದ ಕೆ.ಜೆ ಹಳ್ಳಿ ಖಾಸಗಿ ಹೋಟೆಲ್‌ನಲ್ಲಿ ರಾಷ್ಟ್ರೀಯ ಸಮಗ್ರ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಸಿ.ಕೆ ನಾಣು ಅವರನ್ನು ಆಯ್ಕೆ ಮಾಡುವ ಅಂಗೀಕಾರ ಕೈಗೊಳ್ಳಲಾಗಿದೆ. ತೆಲಂಗಾಣ ಜೆಡಿಎಸ್ ಅಧ್ಯಕ್ಷ ಸೂರಿ ಅವರು ಜೆಡಿಎಸ್ ರಾಷ್ಟ್ರೀಯ ಸಮಗ್ರ ಸಭೆಯಲ್ಲಿ ಒಂದು ಸಾಲಿನ ನಿರ್ಣಯವನ್ನ ಓದಿ ಹೇಳಿದರು.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಸಿ.ಕೆ. ನಾಣು ಅಧ್ಯಕ್ಷತೆಯಲ್ಲಿ ಉಚ್ಛಾಟಿತ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ಕೇರಳ ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳ ಪದಾಧಿಕಾರಿಗಳು ಭಾಗಿಯಾಗಿದ್ದರು. ಬಳಿಕ ಸಿಎಂ ಇಬ್ರಾಹಿಂ ಸುದ್ದಿಗೋಷ್ಠಿ ನಡೆಸಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಬಹಿರಂಗ ಪಡಿಸಿದರು.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆ ನನ್ನ ನಿರ್ಣಯ ಅಲ್ಲ. ಅದು ರಾಷ್ಟ್ರೀಯ ಕೌನ್ಸಿಲ್‌ನ ನಿರ್ಧಾರವಾಗಿದೆ. ಹಲವು ಹಿರಿಯರ ಆದರ್ಶ ನಮ್ಮ ಆದರ್ಶ. ಆದರ್ಶವಾದಿಗಳು ಸತ್ತರೂ ಅವರ ಅದರ್ಶ ಶಾಶ್ವತವಾಗಿ ಇರುತ್ತದೆ. ಕೆಲವರು ಬದುಕಿದ್ರೂ ಆದರ್ಶ ಬಿಟ್ಟು ಸತ್ತಂತೆ ಇರ್ತಾರೆ. ಜಯಪ್ರಕಾಶ್ ನಾರಾಯಣರ ಸಿದ್ಧಾಂತದ ಮೇಲೆ ಜನತಾ ಪಕ್ಷ ಕಟ್ಟಲಾಗಿದೆ. ಎಲ್ಲಾ ರಾಜ್ಯಗಳ ಅಧ್ಯಕ್ಷರ ನೇಮಕವನ್ನು ನಾಣು ಅವರಿಗೆ ನೀಡಲಾಗಿದೆ. ಮುಂದಿನ ಜನವರಿಯಲ್ಲಿ ಹುಬ್ಬಳ್ಳಿಯಲ್ಲೇ ಬೃಹತ್ ಸಮಾವೇಶ ಮಾಡಲಾಗುತ್ತದೆ. ರಾಹುಲ್ ಗಾಂಧಿ, ಅಖಿಲೇಶ್ ಯಾದವ್, ನಿತೀಶ್ ಕುಮಾರ್ ಕೂಡ ಬರ್ತಾರೆ ಎಂದರು.
ಈಗಷ್ಟೇ ನಿಶ್ಚಿತಾರ್ಥ ಆಗಿದೆ. ಮಾಂಗಲ್ಯ ಕಟ್ಟುವಾಗ ನಮ್ಮ ಜೊತೆ ಇರುವ ಶಾಸಕರನ್ನ ತೋರಿಸ್ತೇವೆ. ಸಿದ್ಧಾಂತದ ವಿರುದ್ಧ ಹೋಗಿದ್ದಕ್ಕೆ ದೇವೇಗೌಡರ ಜಾಗಕ್ಕೆ ನೂತನ ರಾಷ್ಟ್ರಾಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಜೆಡಿಎಸ್‌ನಿಂದ ಒಂದು ಕುಟುಂಬ ಹೊರ ಹೋಗಿದೆ. ನಾವು ಉಚ್ಛಾಟನೆ ಮಾಡಿಲ್ಲ, ತೆಗೆದಿದ್ದೇವೆ. ದೇವೇಗೌಡರ ತೀರ್ಮಾನ ಖಲಾಸ್ ಆಗಿದೆ. ಇನ್ಮುಂದೆ ನಾಣು ಅವರೇ ಪಕ್ಷದ ತೀರ್ಮಾನ ತೆಗೆದುಕೊಳ್ತಾರೆ ಎಂದು ಸಿಎಂ ಇಬ್ರಾಹಿಂ ಹೇಳಿದರು.
ತೆನೆ ಹೊತ್ತ ಮಹಿಳೆಯ ಚಿಹ್ನೆ ಯಾರಿಗೆ?
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರನ್ನು ನೇಮಕ ಮಾಡಿರುವ ನಾಣು, ಇಬ್ರಾಹಿಂ ಬಣ ಈ ತೀರ್ಮಾನವನ್ನು ಚುನಾವಣಾ ಆಯೋಗಕ್ಕೆ ತಿಳಿಸಲು ತೀರ್ಮಾನಿಸಿದೆ. ಆ ಬಳಿಕ ನಾಣು ಅವರು ಅಧ್ಯಕ್ಷರಾಗಿರುವ ಪಕ್ಷಕ್ಕೆ ತೆನೆ ಹೊತ್ತ ಮಹಿಳೆಯ ಚಿನ್ಹೆ ನೀಡಬೇಕು ಎಂದು ಚುನಾವಣಾ ಆಯೋಗಕ್ಕೂ ಮನವಿ ಮಾಡ್ತೇವೆ ಎಂದಿದ್ದಾರೆ. ಚುನಾವಣಾ ಆಯೋಗದ ನಿಯಮದ ಪ್ರಕಾರ ಚುನಾವಣೆಯಲ್ಲಿ ಗೆದ್ದ 3ನೇ 2ರಷ್ಟು ಶಾಸಕರ ಬೆಂಬಲ ಯಾವ ಬಣಕ್ಕೆ ಇರುತ್ತೋ ಅವರಿಗೆ ಪಕ್ಷದ ಚಿಹ್ನೆ ಕೊಡಲಾಗುತ್ತೆ. ಅಂದ್ರೆ ಸದ್ಯ ಜೆಡಿಎಸ್ ಪಕ್ಷ ಕರ್ನಾಟಕದಲ್ಲಿ 19 ಶಾಸಕರನ್ನು ಗೆಲ್ಲಿಸಿದೆ. ಅದರಲ್ಲಿ 3ನೇ 2ರಷ್ಟು ಅಂದ್ರೆ 13ಕ್ಕೂ ಹೆಚ್ಚು ಶಾಸಕರು ಇಬ್ರಾಹಿಂ ಬಣವನ್ನ ಬೆಂಬಲಿಸಬೇಕು. ಆಗ ಮಾತ್ರ ಜೆಡಿಎಸ್ ಪಕ್ಷದ ಅಧಿಕೃತ ಚಿಹ್ನೆ ದೇವೇಗೌಡರ ಕೈ ತಪ್ಪುವ ಸಾಧ್ಯತೆ ಇದೆ.






