ಸಾಂಸ್ಕೃತಿಕ

ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಸೇರಿ 8 ಮಂದಿಗೆ ಪ್ರಶಸ್ತಿ

Views: 2

ಬೆಂಗಳೂರು: ರಾಜ್ಯ ಸರ್ಕಾರ ನೀಡುವ 2022–23 ಮತ್ತು 2023–24ನೇ ಸಾಲಿನ ‘ಜಾನಪದ ಶ್ರೀ ಪ್ರಶಸ್ತಿ’, ‘ಜಕಣಾಚಾರಿ ಪ್ರಶಸ್ತಿ’ ಹಾಗೂ ‘ವರ್ಣಶಿಲ್ಪ ವೆಂಕಟಪ್ಪ ಪ್ರಶಸ್ತಿ’ಗೆ ಎಂಟು ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ.

‘ವರ್ಣಶಿಲ್ಪ ವೆಂಕಟಪ್ಪ ಪ್ರಶಸ್ತಿ’ಗೆ ಮೈಸೂರಿನ ಜಿ.ಎಲ್.ಎನ್. ಸಿಂಹ ಮತ್ತು ಕಲಬುರಗಿಯ ಬಸವರಾಜ ಎಲ್. ಜಾನೆ, ‘ಜಕಣಾಚಾರಿ ಪ್ರಶಸ್ತಿ’ಗೆ ಕಲಬುರಗಿಯ ಮಹದೇವಪ್ಪ ಎಲ್. ಶಿಲ್ಪಿ ಮತ್ತು ಚಿಕ್ಕಮಗಳೂರಿನ ಎಸ್.ಪಿ. ಜಯಣ್ಣಾಚಾರ್, ‘ಜಾನಪದ ಶ್ರೀ ಪ್ರಶಸ್ತಿ’ಗೆ ದಕ್ಷಿಣ ಕನ್ನಡದ ಅರುವ ಕೊರಗಪ್ಪ ಶೆಟ್ಟಿ (ಯಕ್ಷಗಾನ), ಬೀದರ್‌ನ ಕಲ್ಲಪ್ಪ ಮಿರ್ಜಾಪುರ (ರಿವಾಯತ್ ಪದಗಳು), ಚಿಕ್ಕಮಗಳೂರಿನ ಜಿ.ಪಿ. ಜಗದೀಶ್ (ವೀರಗಾಸೆ) ಹಾಗೂ ಚಿತ್ರದುರ್ಗದ ಹಲಗೆ ದುರ್ಗಮ್ಮ (ಹಲಗೆ ವಾದನ–ಲಾವಣಿ ಪದಗಳು) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.

ಈ ಪ್ರಶಸ್ತಿಗಳು ತಲಾ ₹ 5 ಲಕ್ಷ ನಗದನ್ನು ಒಳಗೊಂಡಿವೆ. ಕಲಾವಿದ ವಿ.ಟಿ. ಕಾಳೆ ಅವರ ಅಧ್ಯಕ್ಷತೆಯ ಸಮಿತಿ ಈ ಆಯ್ಕೆ ಮಾಡಿದೆ. ‘ಜಕಣಾಚಾರಿ ಪ್ರಶಸ್ತಿ’ಯನ್ನು ಜ.1ರಂದು ನಡೆಯುವ ವಿಶ್ವಕರ್ಮ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಪ್ರದಾನ ಮಾಡಲಾಗುವುದು. ಉಳಿದ ಪ್ರಶಸ್ತಿಗಳನ್ನು ಜನವರಿ ಕೊನೆಯ ವಾರ ಅಥವಾ ಫೆಬ್ರವರಿ ತಿಂಗಳಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಶ್ರೀ ಅರುವ ಕೊರಗಪ್ಪ ಶೆಟ್ಟಿ

ತಂದೆ ದಿ| ಸುಬ್ಬಯ್ಯ ಶೆಟ್ಟಿ ತಾಯಿ ದಿ| ಶಾಂತಮ್ಮ ಅವರ ಪುತ್ರ ತೆಂಕು ತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಅವರು ಯಕ್ಷಗಾನ ತಿರುಗಾಟದಲ್ಲಿ ಕಟೀಲು ಮೇಳದಲ್ಲಿ 3 ವರ್ಷಗಳು, ಕುತ್ಯಾಳ ಮೇಳ- 2ವರ್ಷಗಳು, ಕೂಡ್ಲು ಮೇಳ- 2 ವರ್ಷ, ಕುಂಡಾವು ಮೇಳ- 2 ವರ್ಷ, ಕರ್ನಾಟಕ ಮೇಳ- 31 ವರ್ಷ, ಮಂಗಳಾದೇವಿ ಮೇಳ- 12 ವರ್ಷ ಎಡನೀರು ಮೇಳ- 1 ವರ್ಷ, ಕದ್ರಿ ಮೇಳ- 2ವರ್ಷ, ಬಪ್ಪನಾಡು ಹಾಗೂ ಇತರ- 8 ವರ್ಷಗಳು

ಒಟ್ಟು 400ಕ್ಕಿಂತಲೂ ಅಧಿಕ ಸನ್ಮಾನಗಳನ್ನು ಪಡೆದ ಹೆಗ್ಗಳಿಕೆ ಇವರಿಗಿದೆ. ಕರ್ನಾಟಕ ರಾಜ್ಯ ಪ್ರಶಸ್ತಿ, ಪೇಜಾವರ ಪ್ರಶಸ್ತಿ, ಎಡನೀರು ಪ್ರಶಸ್ತಿ, ಒಡಿಯೂರು ಪ್ರಶಸ್ತಿ, ಮಣಿಲ ಪ್ರಶಸ್ತಿ, ರೋಟರಿ ಪ್ರಶಸ್ತಿ, ಲಯನ್ಸ್ ಪ್ರಶಸ್ತಿ ಮೊದಲಾದುವುಗಳು.

ಬಿರುದು ಬಾವಲಿಗಳು: ರಂಗಸ್ಥಳದ ರಾಜ, ಅಭಿನಯ ಭಾರ್ಗವ, ರಂಗಶಿಲ್ಪಿ ಮೊದಲಾದುವುಗಳು. ನೆನಪಿಡುವ ಘಟನೆ ನಡೆದದ್ದು: ದೇರಳಕಟ್ಟೆಯಲ್ಲಿ ‘ದ್ರೌಪದೀ ವಸ್ತ್ರಾಪಹಾರ’ ಆಟದ ಸಂದರ್ಭದಲ್ಲಿ ದ್ರೌಪದಿಯ ಸೀರೆಯನ್ನು ಸೆಳೆಯುವ ಸಂದರ್ಭದಲ್ಲಿ ಮುದುಕಿಯೊಬ್ಬಳು ಚೂರಿಯನ್ನು ತೆಗೆದು ರಂಗಸ್ಥಳದತ್ತ ಎಸೆದಳು. ಇದು ಅರುವ ಕೊರಗಪ್ಪ ಶೆಟ್ಟಿಯವರ ಪಾತ್ರಚಿತ್ರಣದ ನೈಜತೆಯನ್ನು ಪ್ರತಿಬಿಂಬಿಸಿದ ಘಟನೆ. ವಿಶಿಷ್ಟ ಕಾರ್ಯಕ್ರಮ: ಅರುವ ಕೊರಗಪ್ಪ ಶೆಟ್ಟಿಯವರ ದುಶ್ಶಾಸನ ಪಾತ್ರ ಅವರ ಮಾಸ್ಟರ್ ಪೀಸ್. ಅವರು ದುಶ್ಶಾಸನ ಪಾತ್ರ ಮಾಡುತ್ತಾ 50 ವರ್ಷಗಳನ್ನು ಪೂರೈಸಿದಾಗ ದುಶ್ಶಾಸನ – 50 ಎಂಬ ಕಾರ್ಯಕ್ರಮ ನಡೆದಿದೆ.

ಅರುವ ಕೊರಗಪ್ಪ ಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಮತ್ತು ಸಮಾಜಸೇವೆ  ಪ್ರತಿಷ್ಠಾನದಿಂದ ತುಂಬಾ ಜನರು ಪ್ರಯೋಜನ ಪಡೆದಿದ್ದಾರೆ. ವಿವಾಹಯೋಗ್ಯರಾದ ಸುಮಾರು 75 ಹೆಣ್ಣುಮಕ್ಕಳ ವಿವಾಹಕ್ಕೆ ಧನಸಹಾಯ ಮಾಡಿದ್ದಾರೆ. ಸುಮಾರು 75 ಕಲಾವಿದರಿಗೆ ನಿಧಿಸಹಿತ ಸನ್ಮಾನ ಮಾಡಿದ್ದಾರೆ. ಸುಮಾರು ಆರೇಳು ಅಶಕ್ತ ಕಲಾವಿದರಿಗೆ ನಿಧಿ ಸಮರ್ಪಿಸಿದ್ದಾರೆ. ಹಲವಾರು ಮಕ್ಕಳಿಗೆ ವಿದ್ಯಾರ್ಥಿವೇತನವನ್ನೂ ನೀಡುತ್ತಿದ್ದಾರೆ.

 

Related Articles

Back to top button
error: Content is protected !!