ತೆಂಕುತಿಟ್ಟಿನ ರಸರಾಗ ಚಕ್ರವರ್ತಿ ಭಾಗವತ ದಿನೇಶ್ ಅಮ್ಮಣ್ಣಾಯ ನಿಧನ
Views: 150
ಕನ್ನಡ ಕರಾವಳಿ ಸುದ್ದಿ: ಕರಾವಳಿಯ ಯಕ್ಷರಂಗ ಕ್ಷೇತ್ರದಲ್ಲಿ ತಮ್ಮ ಸುಮಧುರ ಗಾಯನದಿಂದ ರಸರಾಗ ಚಕ್ರವರ್ತಿ ಎಂದೇ ಪ್ರಸಿದ್ಧಿ ಪಡೆದಿರುವ ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಭಾಗವತ ದಿನೇಶ್ ಅಮ್ಮಣ್ಣಾಯ(65) ನಿಧನರಾಗಿದ್ದಾರೆ.
ಅ. 16ರಂದು ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿಯ ಸ್ವಗೃಹದಲ್ಲಿ ನಿಧನ ಹೊಂದಿದರು. ದಾಮೋದರ ಮಂಡೆಚ್ಚರ ಶಿಷ್ಯರಾಗಿ ಪುತ್ತೂರು ಮೇಳದ ಮೂಲಕ ಕಲಾ ಜೀವನಕ್ಕೆ ಕಾಲಿಟ್ಟ ದಿನೇಶ್ ಅಮ್ಮಣ್ಣಾಯ ಅವರು ನಾಲ್ಕು ದಶಕಕ್ಕೂ ಹೆಚ್ಚು ಕಾಲ ಯಕ್ಷಗಾನ ರಂಗದಲ್ಲಿ ಸೇವೆ ಸಲ್ಲಿಸಿದ್ದರು.
ಪ್ರಾರಂಭದಲ್ಲಿ ಪುತ್ತೂರು ಮೇಳದಲ್ಲಿ ಚೆಂಡೆ, ಮದ್ದಲೆ ವಾದಕರಾಗಿ ಸೇರಿದ ದಿನೇಶ್ ಅಮ್ಮಣ್ಣಾಯ ಅವರು ಬಳಿಕ ಅದೇ ಮೇಳದಲ್ಲಿ ಭಾಗವತರಾಗಿ ಮಿಂಚಿದರು. ಕಾಡಮಲ್ಲಿಗೆ, ಕಚೂರಮಾಲ್ಡಿ ಪಟ್ಟದಪದ್ಮಲೆ, ನಳದಮಯಂತಿ, ಸತ್ಯ ಹರಿಶ್ಚಂದ್ರ ಪ್ರಸಂಗಗಳು ಅಮ್ಮಣ್ಣಾಯರ ಭಾಗವತಿಕೆಯನ್ನು ಪ್ರಸಿದ್ಧಗೊಳಿಸಿತು.
ರಸಪೋಷಣೆಯಲ್ಲಿ ಅದ್ವಿತೀಯ ಭಾಗವತರಾಗಿದ್ದ ಅವರು ತೆಂಕು ಹಾಗೂ ಬಡಗುತಿಟ್ಟು ಪ್ರಕಾರಗಳೆರಡರಲ್ಲೂ ಗುರುತಿಸಿಕೊಂಡಿದ್ದರು. ಕರ್ನಾಟಕ ಮೇಳ, ಎಡನೀರು ಮೇಳದಲ್ಲೂ ಕಲಾವಿದರಾಗಿದ್ದ ಅವರು ಅರಸಿನಮಕ್ಕಿಯಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದರು.
ತಮ್ಮ ಕಂಚಿನ ಕಂಠ ಹಾಗೂ ವಿಶಿಷ್ಟ ರಾಗ ಸಂಯೋಜನೆಯ ಮೂಲಕ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರ ಅಗಲಿಕೆಯಿಂದ ಯಕ್ಷಗಾನ ಲೋಕಕ್ಕೆ ಭಾರಿ ನಷ್ಟವಾಗಿದೆ. ಪೌರಾಣಿಕ ಮತ್ತು ತುಳು ಪ್ರಸಂಗಗಳೆರಡರಲ್ಲೂ ತಮ್ಮ ಛಾಪು ಮೂಡಿಸಿರುವ ಇವರು, ಯಕ್ಷಗಾನ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು. ಉಡುಪಿ ತುಳುಕೂಟವು ಪ್ರತಿಷ್ಠಿತ ‘ಸಾಮಗ ಪ್ರಶಸ್ತಿ’ ನೀಡಿ ಗೌರವಿಸಿತ್ತು. ಹಲವಾರು ಪ್ರಮುಖ ಮೇಳಗಳಲ್ಲಿ ತಿರುಗಾಟ ನಡೆಸಿ ಅನುಭವ ಹೊಂದಿದ್ದ ಅವರು, ಇತ್ತೀಚಿನ ದಿನಗಳಲ್ಲಿ ಹವ್ಯಾಸಿ ಭಾಗವತರಾಗಿ ತಮ್ಮ ಕಲಾ ಸೇವೆಯನ್ನು ಮುಂದುವರೆಸಿದ್ದರು.






