ಡ್ರಗ್ಸ್ ಮಾತ್ರೆ ನೀಡಿ, ಸ್ನೇಹಿತರಿಂದಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ
Views: 90
ಕನ್ನಡ ಕರಾವಳಿ ಸುದ್ದಿ: ಡ್ರಗ್ಸ್ ಮಾತ್ರೆ ನೀಡಿ, ಸ್ನೇಹಿತರೇ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಫೆಬ್ರವರಿ 14ರಂದು ಘಟನೆ ನಡೆದಿದೆ ಎನ್ನಲಾಗಿದ್ದು, ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯಾಗಿರುವ 19 ವರ್ಷದ ಯುವತಿ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಡಿಕ್ಸನ್ ಸ್ಯಾಂಡ್ರ ಹಾಗೂ ನಿಖಿಲ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ತಮಿಳುನಾಡು ಮೂಲದ ಯುವತಿ ಬೆಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಇನ್ಸ್ಟಾಗ್ರಾಂನಲ್ಲಿ ಪಶ್ಚಿಮ ಬಂಗಾಳ ಮೂಲದ ಡಿಕ್ಸನ್ ಪರಿಚಯವಾಗಿತ್ತು. ಸಂತ್ರಸ್ತೆಯ ದೂರಿನ ಅನ್ವಯ, ‘ಪ್ರೀತಿಸುತ್ತಿರುವುದಾಗಿ ಹೇಳಿದ್ದ ಡಿಕ್ಸನ್, ಫೆಬ್ರವರಿ 14ರಂದು ಯುವತಿಯನ್ನು ಜಕ್ಕೂರಿನಲ್ಲಿರುವ ವಿಲ್ಲಾವೊಂದಕ್ಕೆ ಆಹ್ವಾನಿಸಿದ್ದ. ಅದರಂತೆ ಸಂತ್ರಸ್ತೆ ಹಾಗೂ ಆಕೆಯ ಸ್ನೇಹಿತೆ ವಿಲ್ಲಾಗೆ ಹೋಗಿದ್ದರು. ಈ ವೇಳೆ ಡಿಕ್ಸನ್ ಹಾಗೂ ನಿಖಿಲ್ ಬಲವಂತವಾಗಿ ತನಗೆ ಮಾತ್ರೆಯೊಂದನ್ನು ತಿನ್ನಿಸಿದ್ದರು” ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
”ಕೆಲ ಸಮಯದ ಬಳಿಕ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ತನ್ನ ಮೇಲೆ ಡಿಕ್ಸನ್ ಹಾಗೂ ನಿಖಿಲ್ ಅತ್ಯಾಚಾರ ಎಸಗಿದ್ದಾರೆ. ಬಳಿಕ ನಡೆದ ಘಟನೆಯ ಕುರಿತು ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿದ್ದಾರೆ”. ನಡೆದಿರುವ ಘಟನೆಯಿಂದ ತಾನು ಆಘಾತಕ್ಕೊಳಗಾಗಿದ್ದು, ನಂತರ ಸಹೋದರನ ಸೂಚನೆಯಂತೆ ದೂರು ನೀಡುತ್ತಿರುವುದಾಗಿ ಸಂತ್ರಸ್ತೆ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.






