ಡೆಂಗ್ಯೂ ʼಸಾಂಕ್ರಾಮಿಕ ರೋಗʼ ಮಾರ್ಗಸೂಚಿ ಪಾಲಿಸದಿದ್ದರೆ ಶಾಲಾ-ಕಾಲೇಜು, ಹೋಟೆಲ್, ಲಾಡ್ಜ್, ರೆಸಾರ್ಟ್ಗಳಿಗೆ ಬೀಳುತ್ತೆ ದಂಡ!

Views: 53
ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ವಿಪರೀತ ಹೆಚ್ಚಾದ ಹಿನ್ನೆಲೆಯಲ್ಲಿ ಡೆಂಗ್ಯೂ ಜ್ವರವನ್ನು ʼಸಾಂಕ್ರಾಮಿಕ ರೋಗʼ ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.
ಈ ಕುರಿತು ವಿಕಾಸಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಡೆಂಗ್ಯೂ ಸಾಂಕ್ರಾಮಿಕ ರೋಗವನ್ನಾಗಿ ಘೋಷಿಸುವುದರ ಜೊತೆಗೆ ಡೆಂಗ್ಯೂ ನಿಯಂತ್ರಣ ಮಾರ್ಗಸೂಚಿಗಳನ್ನು ಪಾಲಿಸದವರಿಗೆ ದಂಡ ಕೂಡ ಹಾಕಲಾಗುವುದು ಎಂದು ಹೇಳಿದರು.
ಡೆಂಗ್ಯೂ ಮಾರ್ಗಸೂಚಿಗಳನ್ನು ಪಾಲಿಸದಿದ್ದರೆ, ಗ್ರಾಮೀಣ ಪ್ರದೇಶದ ಮನೆಗಳಿಗೆ 200 ರೂ ಹಾಗೂ ನಗರ ಪ್ರದೇಶಗಳಲ್ಲಿ 400 ರೂಪಾಯಿ ದಂಡ ವಿಧಿಸಲಾಗುವುದು. ಅಲ್ಲದೇ ಶಾಲಾ ಕಾಲೇಜು, ಹೋಟೆಲ್, ಲಾಡ್ಜ್, ರೆಸಾರ್ಟ್ಗಳು ಸೇರಿದಂತೆ ವಾಣಿಜ್ಯ ಸಂಘ, ಸಂಸ್ಥೆಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ 500 ಹಾಗೂ ನಗರ ಪ್ರದೇಶಗಳಲ್ಲಿ 1000 ರೂ. ದಂಡ ನಿಗದಿಪಡಿಸಲಾಗಿದ್ದು, ಕಟ್ಟಡ ನಿರ್ಮಾಣ, ಹೊರಾಂಗಣ ಸ್ಥಳಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ 1000 ರೂ ಹಾಗೂ ನಗರ ಪ್ರದೇಶಗಳಲ್ಲಿ 2000 ರೂ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ಈಡಿಸ್ ಸೊಳ್ಳೆಗಳ ಲಾರ್ವಾ ಉತ್ಪತ್ತಿಗೆ ಅನುಕೂಲವಾಗುವಂತೆ ನೀರು ಸಂಗ್ರಹಣೆಯಾಗಬಾರದು. ಈ ನಿಟ್ಟಿನಲ್ಲಿ ಎಲ್ಲರೂ ಎಚ್ಚರಿಕೆ ವಹಿಸುವುದು ಮುಖ್ಯ. ದಂಡ ವಿಧಿಸುವುದಕ್ಕಿಂತ ಜನರು ಡೆಂಗ್ಯೂ ವಿಚಾರದಲ್ಲಿ ಜವಾಬ್ದಾರಿಯುತವಾಗಿ ಮುನ್ನೆಚ್ಚರಿಕೆ ವಹಿಸಲಿ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಈ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ. ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನಿಯಮ ಜಾರಿಗೊಳಿಸುವ ಅಧಿಕಾರ ನೀಡಲಾಗಿದೆ ಎಂದು ಹೇಳಿದರು.