ಡಿಕೆಶಿ ಸಚಿವ ಸಂಪುಟದಲ್ಲಿ ಯುವಕರಿಗೆ ಮಣೆ..! ಸಿದ್ದು ಆಪ್ತರಿಗೆ ಸಿಗದ ಸ್ಪಷ್ಟತೆ
Views: 47
ಕನ್ನಡ ಕರಾವಳಿ ಸುದ್ದಿ: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬೆನ್ನಲ್ಲೆ ಹೊಸ ಸರಕಾರಕ್ಕೆ ಸಕಲ ಸಿದ್ಧತೆಗಳು ಶುರುವಾಗಿದೆ. ಮುಖ್ಯ ಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ಖಚಿತವಾದರೂ, ಡಿಕೆಶಿ ಸಂಪುಟಕ್ಕೆ ಯಾರೆಲ್ಲ ಸೇರಲಿದ್ದಾರೆ ಎನ್ನುವ ಕುತೂಹಲ ಶುರುವಾಗಿದೆ.
ಸಿದ್ದು ಆಪ್ತರಿಗೆ ಸಿಗದ ಸ್ಪಷ್ಟತೆ
ಇನ್ನು ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಕಾಣಿಸಿಕೊಂಡಿದ್ದ 10ಕ್ಕೂ ಹೆಚ್ಚು ಸಚಿವರು ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಮುಂದು ವರೆಯುವರೋ ಅಥವಾ ಇಲ್ಲವೋ ಎನ್ನುವ ಸ್ಪಷ್ಟನೆ ಸಿಕ್ಕಿಲ್ಲ. ಇದರೊಂದಿಗೆ ಕೆಲ ಸಚಿವಾಕಾಂಕ್ಷಿಗಳಿಗೆ ಡಿಕೆಶಿಗೆ ಮಣೆ ಹಾಕುವರೋ ಅಥವಾ ತಮ್ಮ ಆಪ್ತರಿಗೆ ಹೆಚ್ಚಿನ ಅವಕಾಶ ನೀಡುವರೋ ಎನ್ನುವ ಗೊಂದಲಗಳಿವೆ. ಈ ಗೊಂದಲಕ್ಕೆ ಶುಕ್ರವಾರ ಸ್ಪಷ್ಟನೆ ಸಿಗುವ ಸಾಧ್ಯತೆಯಿದ್ದು, ದೆಹಲಿಯಲ್ಲಿ ಸಿದ್ದರಾಮಯ್ಯ ಅವರು ಪಕ್ಷದ ಹೈಕಮಾಂಡ್ ಮೇಲೆ ತಮ್ಮ ಆಪ್ತರಿಗೆ ಸೂಕ್ತ ಸ್ಥಾನಮಾನ ನೀಡುವಂತೆ ಒತ್ತಡ ಹೇರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಹಿರಿಯ ಸಚಿವರಿಗೆ ಕೊಕ್?
ಚುನಾವಣೆಗೆ ಎರಡು ವರ್ಷವಿರುವಾಗ ಯುವಕರಿಗೆ ಆದ್ಯತೆ ನೀಡುವ ಲೆಕ್ಕಾಚಾರದಲ್ಲಿ ಪಕ್ಷದ ಹೈಕಮಾಂಡ್ ಇದೆ ಎನ್ನಲಾಗಿದೆ. ಆದ್ದರಿಂದ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿದ್ದ ಹಲವು ಹಿರಿಯ ಸಚಿವರನ್ನು ಕೈಬಿಟ್ಟು 2ನೇ, 3ನೇ ಬಾರಿ ಶಾಸಕರಾಗಿರುವವರಿಗೆ ಅವಕಾಶ ನೀಡುವ ಲೆಕ್ಕಾಚಾರಗಳು ನಡೆಯುತ್ತಿದೆ. ಆದರೆ ಈ ರೀತಿ ಮಾಡುವುದರಿಂದ, ಎದುರಾಗಬಹುದಾದ ಸಮಸ್ಯೆಗಳನ್ನು ಗಮನಿಸಿಕೊಂಡು ಎಚ್ಚರಿಕೆಯ ಹೆಜ್ಜೆ ಇಡಲು ಹೈಕಮಾಂಡ್ ತೀರ್ಮಾನಿಸಿದೆ. ಏಕೆಂದರೆ, ಈಗಾಗಲೇ ಸಿದ್ದರಾಮಯ್ಯ ಅವರನ್ನು ಕೈಬಿಟ್ಟಿರುವುದರಿಂದ ಅಸಮಾಧಾನವಿದೆ. ಈಗ ಹಿರಿಯರನ್ನು ಕೈಬಿಟ್ಟರೆ ಕಾರ್ಯಕರ್ತರು ತಿರುಗಿಬೀಳುವ ಸಾಧ್ಯತೆಯಿದೆ ಎನ್ನುವ ಆತಂಕ ನಾಯಕರಲ್ಲಿದೆ.






