ಡಾ.ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ಕಾಂತಾರದ ಬಾಲ ಪ್ರತಿಭೆ ‘ಸಮೀಕ್ಷಾ ಸುರೇಶ್ ಹಕ್ಲಾಡಿ’ ಆಯ್ಕೆ
Views: 205
ಕನ್ನಡ ಕರಾವಳಿ ಸುದ್ದಿ: ಡಾ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ವತಿಯಿಂದ ನೀಡುವ ಐದನೇ ವರ್ಷದ ಡಾ.ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಸಮೀಕ್ಷಾ ಸುರೇಶ ಹಕ್ಲಾಡಿ ಆಯ್ಕೆಯಾಗಿದ್ದಾರೆ.
ಇದೇ 30ರಂದು ಕೋಟ ಕಾರಂತ ಥೀಮ್ ಪಾರ್ಕಿನಲ್ಲಿ ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಪಡೆಯಲಿದ್ದಾರೆ.
ಕುಂದಾಪುರ ತಾಲೂಕಿನ ಸುರೇಶ್ ಹಕ್ಲಾಡಿ ಹಾಗೂ ಗೀತಾ ಅವರ ಪುತ್ರಿ ಸಮೀಕ್ಷಾ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು, ‘ಕಾಂತಾರ ಚಾಪ್ಟರ್ 1’ ಸಿನಿಮಾದಲ್ಲಿ ಬಾಲ ಪ್ರತಿಭೆಯಾಗಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾಳೆ.
ಈಕೆ 5ನೇ ತರಗತಿವರೆಗೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಕ್ಲಾಡಿಯಲ್ಲಿ 7ನೇ ತರಗತಿಯನ್ನು, ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾಡಿಯಲ್ಲಿ ಕಲಿಯುತ್ತಿದ್ದಾಳೆ.12ರ ವಯಸ್ಸಿನ ಈ ಬಾಲ ಪ್ರತಿಭೆ ಎಳೆ ಪ್ರಾಯದಲ್ಲಿ ಶಿಕ್ಷಣದ ಜೊತೆಗೆ ಇವಳು ತಾಂಡವಂ ಡಾನ್ಸ್ ಸ್ಟುಡಿಯೋದಲ್ಲಿ ಸೀನಿಯರ್ ವಿಭಾಗದಲ್ಲಿ ಡಾನ್ಸ್ ಕಲಿಯುತ್ತಿದ್ದಾಳೆ ಹಾಗೂ ಭರತನಾಟ್ಯವನ್ನು ಸೀನಿಯರ್ ವಿಭಾಗದಲ್ಲಿ ಶ್ರೀಮತಿ ವಿದುಷೀ ಭಾಗೀರಥಿ. ಎಮ್. ರಾವ್ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ವಿಭಾಗದಲ್ಲಿ ಶ್ರೀಮತಿ ಭಾಗ್ಯೇಶ್ವರಿ ಇವರಲ್ಲಿ ಕಲಿಯುತ್ತಿದ್ದಾಳೆ ಮತ್ತು ಯಕ್ಷಗಾನ ಹಾಗೂ ಇನ್ನಿತರ ಚಟುವಟಿಕೆಯಲ್ಲಿ ತೊಡಗಿರುತ್ತಾಳೆ.
ಇತ್ತೀಚಿಗೆ ‘ಕಾಂತಾರ ಚಾಪ್ಟರ್ 1’ ಚಲನಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಅಭಿಮಾನಿಗಳಿಂದ ವಿಶೇಷ ಸನ್ಮಾನ ಪಡೆದುಕೊಂಡಿದ್ದಾರೆ.
ಸಾಧನೆಗೈದ ವಿದ್ಯಾರ್ಥಿನಿಗೆ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.










