ಕರಾವಳಿ

ಟಿವಿ, ಸಿನೆಮಾ ನಾಟಕಗಳಲ್ಲಿ ದೈವಾರಾಧನೆಯ ಪ್ರದರ್ಶಿಸಿದರೆ ಉಗ್ರ ಹೋರಾಟ :ತುಳುನಾಡ ದೈವಾರಾಧನಾ ಸಂರಕ್ಷಣಾ ವೇದಿಕೆ ಎಚ್ಚರಿಕೆ 

Views: 60

ಕಾಂತಾರ ಸಿನಿಮಾ ರಿಲೀಸ್‌ ಆಗಿ ಹಿಟ್‌ ಕಂಡ ಬಳಿಕ ಹಲವು ಧಾರಾವಾಹಿಗಳಲ್ಲಿ, ಇನ್ನಿತರ ಕಾರ್ಯಕ್ರಮಗಳಲ್ಲಿ, ನಾಟಕ ಹೀಗೆ ದೈವದ ಅಣಕು ವೇಷ ಧರಿಸುತ್ತಿರುವುದು ಕಾಮನ್‌ ಆಗಿ ಬಿಟ್ಟಿದೆ. ಈ ಮುಂಚೆ ಸ್ಟಾರ್‌ ಸುವರ್ಣ ವಾಹಿನಿಯ ʻಕಾವೇರಿ ಕನ್ನಡ ಮೀಡಿಯಂʼ

ಧಾರಾವಾಹಿಯಲ್ಲಿ ಕರಾವಳಿಯ ನಂಬಿಕೆ ಭೂತಾರಾಧನೆಯನ್ನು ಬಳಸಿಕೊಂಡಿದ್ದರು. ಈ ಬಗ್ಗೆ ಕರಾವಳಿಯಲ್ಲಿ ದೈವಾರಾಧಕರು ಹಾಗೂ ತುಳುನಾಡ ಮಂದಿ ಆಕ್ರೋಶ ವ್ಯಕ್ತಪಡಿಸಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದರು. ಸಿನಿಮಾ ಮತ್ತು ನಾಟಕಗಳಲ್ಲಿ ದೈವಾರಾಧನೆಗೆ ಅಪಮಾನ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ದೈವಾರಾಧಕರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಅದರ ಜತೆಗೆ ಕಾಂತಾರ 2ನಲ್ಲಿ ದೈವಾರಾಧನೆ ಪ್ರದರ್ಶನ ಇರಬಾರದು ಎಂದು ವಾರ್ನಿಂಗ್‌ ಕೊಟ್ಟಿದ್ದಾರೆ.

ಕಾಂತಾರ  ಸಿನಿಮಾದಲ್ಲಿ ದೈವದ ಅಣಕು ವೇಷ ಹಾಕಿರುವ ರಿಷಬ್ ಶೆಟ್ಟಿ  `ಶಿವದೂತೆ ಗುಳಿಗೆ’ ನಾಟಕದಲ್ಲಿ ದೈವದ ಅಣಕು ವೇಷ ಧರಿಸಿದ ಸ್ವರಾಜ್ ಹಾಗೂ `ಕಾವೇರಿ’ ಧಾರಾವಾಹಿಯ ಸಿ.ಕೆ ಪ್ರಶಾಂತ್ ವಿರುದ್ಧ ದಲಿತ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ತುಳುನಾಡ ದೈವಾರಾಧನಾ ಸಂರಕ್ಷಣಾ ವೇದಿಕೆ ಮನವಿ ಮಾಡಿದೆ.

ದೈವಾರಾಧಕರ ಹೋರಾಟಕ್ಕೆ ವಿಶ್ವ ಹಿಂದೂ ಪರಿಷತ್ , ಬಜರಂಗದಳ ಬೆಂಬಲ ನೀಡಿದೆ. ಟಿವಿ, ಸಿನೆಮಾ ನಾಟಕಗಳಲ್ಲಿ ದೈವಾರಾಧನೆಯ ಪ್ರದರ್ಶನವಾಗಬಾರದು. ಮುಂದೆ ಕಂಡ ಕಂಡಲ್ಲಿ ದೈವಾರಾಧನೆ ಪ್ರದರ್ಶನವಾದರೆ ಮುತ್ತಿಗೆ ಹಾಕುತ್ತೇವೆ. ಈ ಬಗ್ಗೆ ರಿಷಬ್ ಶೆಟ್ಟಿಗೂ ಎಚ್ಚರಿಕೆ ನೀಡುತ್ತೇವೆ ಎಂದು ಬಜರಂಗ ದಳದ ಮುಖಂಡ ಶರಣ ಪಂಪ್‌ವೆಲ್‌ ಎಚ್ಚರಿಕೆ ನೀಡಿದ್ದಾರೆ.

ಬೆಳ್ತಂಗಡಿ ನಳಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ್‌ ಮಾಧ್ಯಮವೊಂದಕ್ಕೆ ಮಾತನಾಡಿ ʻʻತುಳು ನಾಡಲ್ಲಿ ಹುಟ್ಟಿ ದೈವಕ್ಕೆ ಅಪಮಾನ ಮಾಡುತ್ತಾರೆ ಎಂದರೆ ಸುಮ್ಮನೆ ಇರಲು ಆಗಲ್ಲ. ಮೂಲ ಪರಂಪರೆಯಿಂದ ನಾವು ಮಾಡಿಕೊಂಡು ಬಂದ ಚಾಕರಿ ಅದರೂ ದೈವದ ಚಾಕರಿಯನ್ನು ಮಾಡಿದವರೇ ಮಾಡಬೇಕು. ದೈವದ ಬಣ್ಣ, ಹಚ್ಚಿ, ಗಗ್ಗರ ಕಟ್ಟಿಕೊಂಡು ಇಷ್ಟಬಂದಂತೆ ಮಾಡುತ್ತಿದ್ದಾರೆ. ಕಾಂತಾರ ಸಿನಿಮಾದಲ್ಲಿ ಮಾಡಿದ್ದಾರೆ. ಈಗ ಕಾಂತಾರ 2 ಬರುತ್ತಿದೆ. ಅಲ್ಲಿಯೂ ಒಂದು ವೇಳೆ ಪ್ರದರ್ಶನವಾದರೆ ಹೋರಾಟ ಮಾಡುತ್ತೇವೆʼʼ ಎಂದು ಎಚ್ಚರಿಸಿದ್ದಾರೆ.

Related Articles

Back to top button
error: Content is protected !!