ಚೈತ್ರ ಕುಂದಾಪುರ ನಂಬಿ ಕೆಟ್ಟ ‘ಗೋವಿಂದ’! ಸಿನಿಮಾಗಿಂತಲೂ ರೋಚಕ ಕಥೆ ಇಲ್ಲಿದೆ..

Views: 0
ಹಿಂದೂಪರ ಭಾಷಣಕಾರ್ತಿ ಚೈತ್ರಾ ಕುಂದಾಪುರಳಿಂದ ವಂಚನೆಗೊಳಗಾದ ಗೋವಿಂದ ಬಾಬು ಪೂಜಾರಿ ಮೂಲತಃ ಉಡುಪಿ ಜಿಲ್ಲೆಯ ಬೈಂದೂರು ಮೂಲದ ಉದ್ಯಮಿ. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರಿಗೆ ಟಿಕೆಟ್ ಕೊಡಿಸುವುದಾಗಿ ನಂಬಿಸಿದ ಹಿಂದೂಪರ ಭಾಷಣಕಾರ್ತಿ ಚೈತ್ರಾ ಕುಂದಾಪುರ ಸುಮಾರು 7 ಕೋಟಿ ರೂಪಾಯಿ ಪಡೆದು ವಂಚಿಸಿದ್ದಾಳೆ ಎಂದು ಆರೋಪಿಸಲಾಗಿದೆ.

5 ಸಾವಿರಕ್ಕೂ ಅಧಿಕ ಮಂದಿಗೆ ಅನ್ನದಾತನಾದ ಗೋವಿಂದ ಬಾಬು ಪೂಜಾರಿ
ಬೈಂದೂರಿನ ಬಳಿಯ ಬೀಜೂರಿನ ಕೃಷಿ ಕುಟುಂಬದಲ್ಲಿ ಜನಿಸಿದ ಗೋವಿಂದ ಅವರು ಕಲಿತದ್ದು 7ನೇ ತರಗತಿ. ಸಂಪಾದನೆಗಾಗಿ ಮುಂಬೈ ಶಹರ ಸೇರಿದ ಗೋವಿಂದ ಹೊಟೇಲ್ ನಲ್ಲಿ ಕೆಲಸಕ್ಕೆ ಸೇರಿಕೊಂಡರು. ಈ ವೇಳೆ ಸ್ವಂತದ್ದೇನಾದರೂ ಮಾಡಬೇಕೆಂಬ ಉದ್ದೇಶದಿಂದ ಕಿರಾಣಿ ಅಂಗಡಿಯನ್ನು ತೆರೆದಿದ್ದರು. ಆದರೆ ಅದು ಕೈ ಹಿಡಿಯದ್ದರಿಂದ ಮತ್ತೆ ಹೊಟೇಲ್ ಕಡೆಗೆ ಮುಖಮಾಡಿದರು. ಮುಂಬೈನ ಪೈವ್ ಸ್ಟಾರ್ ಹೋಟೆಲೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡರು
2007ರಲ್ಲಿ ಮತ್ತೆ ಸ್ವಂತ ಉದ್ಯಮದ ಗುರಿಯೊಂದಿಗೆ `ಷೆಫ್ ಟಾಕ್ ಕೇಟರಿಂಗ್ ಸರ್ವೀಸಸ್’ ಅನ್ನು ಪ್ರಾರಂಭಿಸಿದರು. ಅಂದು ಅವರ ಕೆಟರಿಂಗ್ ನಲ್ಲಿ ಇದ್ದಿದ್ದು 7 ನೌಕರರು. ಇದೇ ಮುಂದೆ `ಷೆಫ್ ಫುಡ್ ಆ್ಯಂಡ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್’ ಆಯಿತು. ಇಂದು ಈ ಸಂಸ್ಥೆ 5 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕಲ್ಪಿಸಿದೆ. ಕರ್ನಾಟಕ, ಮಹಾರಾಷ್ಟ್ರ ಮಾತ್ರವಲ್ಲದೆ ಆಂಧ್ರಪ್ರದೇಶ, ಜಾರ್ಖಂಡ್, ಮುಂಬೈ, ಗುಜರಾತ್ ಗಳಲ್ಲೂ ಇವರ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಇವರ ಅತ್ಯಾಧುನಿಕ ಕಿಚನ್ ಗಳು ಅನೇಕ ಕಾರ್ಪೋರೇಟೆ ಕಂಪನಿಗಳಿಗೆ ಸೇವೆ ಒದಗಿಸುತ್ತಿದೆ.
ಇಷ್ಟು ಮಾತ್ರವಲ್ಲದೆ ಅವರು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮತ್ಸ್ಯಬಂಧನ ಕಂಪನಿಯ ಸಹಯೋಗದೊಂದಿಗೆ ರಾಣಿ ಮೀನು ಮತ್ತು ಬೂತಾಯಿ ಮೀನುಗಳಿಂದ ಚಿಪ್ಸ್ ಗಳನ್ನು ತಯಾರಿಸುವ ಕಾರ್ಯಕ್ಕೂ ಕೈ ಹಾಕಿದ್ದರು. ಜೊತೆಗೆ ಪ್ರಜ್ಞಾ ಸಾಗರ್ ಹೋಟೆಲ್ ಮತ್ತು ರೆಸಾರ್ಟ್, ಶೆಫ್ ಟಾಕ್ ನ್ಯೂಟ್ರಿಫುಡ್ ಸಂಸ್ಥೆಗಳನ್ನೂ ಸ್ಥಾಪಿಸಿ ಖ್ಯಾತರಾದರು. ಇಂದು ಅವರು ನೂರಾರು ಕೋಟಿ ವಹಿವಾಟು ನಡೆಸುವ ಯಶಸ್ವಿ ಉದ್ಯಮಿ.
ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಮೇಲೇರಿದ ಗೋವಿಂದ ಪೂಜಾರಿ ಸಮಾಜಕ್ಕೆ ಒಳಿತು ಮಾಡಬೇಕೆಂಬ ಉದ್ದೇಶದಿಂದ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಬಡವರಿಗೆ ನಾನಾ ರೀತಿಯ ಸಹಾಯ ಮಾಡುತ್ತಿದ್ದಾರೆ. ಬೈಂದೂರಿನಲ್ಲೇ ಬಡವರಿಗೆ 9 ಮನೆ ಕಟ್ಟಿ ಕೊಟ್ಟಿದ್ದಾರೆ. ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿದ್ದಾರೆ.
ಗೋವಿಂದ ಅವರ ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡ ಚೈತ್ರಾಕುಂದಾಪುರ!

ಹೀಗೆ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಜನಾನುರಾಗಿಯಾಗಿದ್ದ ಅವರಿಗೆ ರಾಜಕೀಯಕ್ಕೆ ಕ್ಷೇತ್ರಕ್ಕೆ ಧುಮಿಕಿ ಜನರ ಸೇವೆ ಮಾಡಬೇಕೆಂದು ಅಂದುಕೊಂಡಿದ್ದರು. ಆದರೆ ರಾಜಕೀಯ ಜ್ಞಾನ ಹೊಂದಿರಲಿಲ್ಲ. ಹೇಗಾದರೂ ಮಾಡಿ ಬಿಜೆಪಿ ಟಿಕೆಟ್ ಪಡೆಯಬೇಕೆಂಬ ಕಾರಣದಿಂದ ಬಿಜೆಪಿಯಲ್ಲಿ ಗಣ್ಯರ ಸಂಪರ್ಕಕ್ಕಾಗಿ ಪ್ರಯತ್ನಿಸುತ್ತಿದ್ದರು. ಉಡುಪಿ ಜಿಲ್ಲೆಗೆ ಯಾರೇ ಬಿಜೆಪಿ ಗಣ್ಯ ಮುಖಂಡರು ಬಂದರೂ ಅವರನ್ನು ಭೇಟಿಯಾಗುತ್ತಿದ್ದರು. ಈ ಹಂತದಲ್ಲಿಅವರಿಗೆ ಚೈತ್ರಾ ಕುಂದಾಪುರಳ ಪರಿಚಯವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಫೈರ್ ಬ್ರಾಂಡ್ ಹಿಂದೂಪರ ಭಾಷಣಕಾರ್ತಿಯಾಗಿ ಗುರುತಿಸಿಕೊಂಡಿದ್ದ ಆಕೆ ಗೋವಿಂದ ಅವರ ಮುಗ್ಧತೆಯನ್ನು ಚೆನ್ನಾಗಿ ದುರುಪಯೋಗಿಸಿಕೊಂಡಳು. ಆಕೆಯನ್ನು ನಂಬಿ ಹಣ ನೀಡಿದ ಕೋಟ್ಯಾಧಿಪತಿ ಗೋವಿಂದ ಬಾಬು ಪೂಜಾರಿ ಇದೀಗ ದೊಡ್ಡ ಮೊತ್ತವನ್ನು ಕಳೆದುಕೊಂಡಿದ್ದಾರೆ.
ಹೌದು, ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ಬಡತನದಲ್ಲಿ ಬೆಳೆದು, ಹೋಟೆಲ್ನಲ್ಲಿ ಕೆಲಸ ಮಾಡಿ, ಇದೀಗ ಸ್ವಂತ ಹೋಟೆಲ್ ಸ್ಥಾಪಿಸಿ. ಶಿಫ್ ಟಾಪ್ ಎಂಬ ಕಿಚನ್ ನಡೆಸುತ್ತಿದ್ದಾರೆ. ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡು ಈ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಸಮಾಜಸೇವೆ, ಧಾರ್ಮಿಕ, ಶೈಕ್ಷಣಿಕ ಸಹಕಾರವನ್ನು ಮಾಡುತ್ತಾ ಬೈಂದೂರಿನಲ್ಲಿ ಓಡಾಡಿಕೊಂಡಿದ್ದರು. ಇದೇ ಸಮಯದಲ್ಲಿ ರಾಷ್ಟ್ರೀಯತೆ ದೇಶ, ಧರ್ಮ, ಜಾತಿ, ನೀತಿ ಎಂದು ರಾಜ್ಯಾದ್ಯಂತ ಭಾಷಣ ಮಾಡಿಕೊಂಡಿದ್ದ ಚೈತ್ರಾ ಬೈಂದೂರಿನ ಟಿಕೆಟ್ ಡೀಲ್ಗೆ ಇಳಿದಿದ್ದಳು. ತಾನೊಂದು ಟೀಮ್ ಕಟ್ಟಿಕೊಂಡು ಗೋವಿಂದಬಾಬು ಪೂಜಾರಿ ಅವರನ್ನು ಸಂಪರ್ಕ ಮಾಡಿ ಬಿಜೆಪಿ, ಆರ್.ಎಸ್. ಎಸ್ ಸಂಘ, ರಾಷ್ಟ್ರದ ನಾಯಕರು ಪರಿಚಯ ಎಂದು ಕನಸಿನ ಗೋಪುರ ಕಟ್ಟಿಸಿದ್ದಾಳೆ. ಎಲ್ಲವನ್ನೂ ನಂಬಿದ ಗೋವಿಂದ ಬಾಬು ಪೂಜಾರಿ ಹಂತ ಹಂತವಾಗಿ ಐದೂವರೆ ಕೋಟಿ ರೂಪಾಯಿ ನೀಡಿದ್ದಾರೆ.
ಹತ್ತು ತಿಂಗಳ ಹಿಂದೆಯ ಪ್ಲಾನ್ ಮಾಡಿಕೊಂಡಿದ್ದ ಚೈತ್ರ ಮತ್ತು ಗ್ಯಾಂಗ್ ಮೊದಲಿಗೆ ಪರಿಚಯ ಮಾಡಿದ್ದು ಚಿಕ್ಕಮಗಳೂರಿನ ಗಗನ್ ಕಡೂರ್ ಅವರನ್ನು. ಗಗನ್ ಅವರಿಗೆ ಪ್ರಧಾನಿ ಮತ್ತು ಗೃಹ ಕಛೇರಿಯ ನಿಕಟ ಸಂಪಕರ್ದಲ್ಲಿರುವವನು ಎಂದು ಚಿಕ್ಕಮಗಳೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಬಾಬು ಪೂಜಾರಿಗೆ ಗಗನನ್ನು ಚೈತ್ರ ಪರಿಚಯ ಮಾಡಿಸಿದ್ದಳು. ಅಲ್ಲಿಂದಲೇ ಕೋಟಿ ಕೋಟಿ ಲೂಟಿ ಮಾಡಲು ಪ್ಲಾನ್ ಮಾಡಿದ್ದ ಚೈತ್ರ. ಮತ್ತೆ ಒಬ್ಬ ಒಬ್ಬರನ್ನು ಕಥೆಗೆ ತಕ್ಕಂತೆ ಸೀನ್ ಕ್ರಿಯೆಟ್ ಮಾಡಿದ್ದರು.
ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ವಂಚಿಸಿರುವ ಕಥೆ ಸಿನಿಮಾಗಿಂತಲೂ ರೋಚಕವಾಗಿದ್ದು, ಚೈತ್ರಾ ಕುಂದಾಪುರ ಸ್ವತಃ ತಾವೇ ಮೂವರು ಕೇಂದ್ರ ಬಿಜೆಪಿ ನಾಯಕರನ್ನು ಸೃಷ್ಟಿಸಿ ಉದ್ಯಮಿಯನ್ನು ನಂಬಿಸಿರುವುದು ಬಯಲಾಗಿದೆ.
ಕಬಾಬ್ ಮಾರುವವನಿಗೆ ಆರ್.ಎಸ್.ಎಸ್ ಪ್ರಚಾರಕರ ವೇಷ

ಚೈತ್ರಾ ಕುಂದಾಪುರ ತನಗೆ ಬಿಜೆಪಿಯ ಕೇಂದ್ರ ನಾಯಕರು ಹಾಗೂ ಆರ್ಎಸ್ಎಸ್ ವರಿಷ್ಠರು ಪರಿಚಯ ಎಂದು ಹಂತ ಹಂತವಾಗಿ ಏಳು ಕೋಟಿ ರೂಪಾಯಿಯನ್ನು ಉದ್ಯಮಿಯಿಂದ ಪಡೆದಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ವ್ಯವಸ್ಥಿತ ಪ್ಲಾನ್ ಮಾಡಿದ್ದ ಚೈತ್ರಾ ಕುಂದಾಪುರ ನಕಲಿ ಕೇಂದ್ರದ ನಾಯಕರನ್ನೇ ಸೃಷ್ಟಿಸಿದ್ದರು ಎಂದು ತಿಳಿದುಬಂದಿದೆ. ಸಲೂನ್ ಕೆಲಸಗಾರರು, ಕಬಾಬ್ ಮಾರುವವರನ್ನೇ ಬಿಜೆಪಿಯ ಕೇಂದ್ರದ ನಾಯಕರು ಎಂದು ಉದ್ಯಮಿಗೆ ನಂಬಿಸಿದ್ದರು.
ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಸಲೂನ್ ಶಾಪ್ ಒಂದರಲ್ಲಿ ಮೇಕಪ್ ಮಾಡುವ ರಮೇಶ್ ಹಾಗೂ ಧನರಾಜ್ ಎಂಬವರನ್ನು ಆರ್ಎಸ್ಎಸ್ ಪ್ರಚಾರಕರು ಎಂದು ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಪರಿಚಯ ಮಾಡಿಸಲಾಗಿತ್ತು. ಅದಲ್ಲದೇ ಬೆಂಗಳೂರಿನ ಕೆಆರ್ ಪುರಂ ರಸ್ತೆ ಬದಿ ಕಬಾಬ್ ಮಾರುತ್ತಿದ್ದ ನಾಯಕ್ ಎಂಬಾತನನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಎಂದು ಪರಿಚಯ ಮಾಡಿ ಉದ್ಯಮಿಯನ್ನು ಮೋಸದ ಬಲೆಗೆ ಚೈತ್ರಾ ಕುಂದಾಪುರ ಸಿಲುಕಿಸಿದ್ದರು.
ಇನ್ನು ಈಕೆ ಕಥಗೆ ಎಂಟ್ರಿ ಕೊಟ್ಟಿದ್ದು ವಿಶ್ವನಾಥ್ ಜಿ. ವಿಶ್ವನಾಥ್ ಆರ್ ಎಸ್ ಎಸ್ ಕಾರ್ಯಕರ್ತರಾಗಿದ್ದು, ಟಿಕೆಟ್ ಫೈನಲ್ ಆಗ ಬೇಕಾದ್ರೆ ಸಂಘದವರು ಪ್ರಮುಖರಾಗಿರುತ್ತಾರೆ ಎಂದು ವಿಶ್ವನಾಥ್ ಜಿ ಸೀನ್ ಕ್ರಿಯೆಟ್ ಮಾಡಿದ್ದ ಚೈತ್ರ. ಬಳಿಕ ವಿಶ್ವನಾಥ್ ಜಿ ಯನ್ನು ಬಾಬು ಪೂಜಾರಿಯವರಿಗೆ ಪರಿಚಯ ಮಾಡಿ, ಮೊದಲಿಗೆ 50 ಸಾವಿರ ಕೊಡಿ ಟಿಕೆಟ್ ಘೋಷಣೆಯ ಸಮಯದಲ್ಲಿ 3 ಕೋಟಿ ವಿಶ್ವನಾತ್ ಜಿ ಗೆ ಕೊಡಿ ಎಂದು ಹೇಳಿದ್ದಳು.
ಐದುವರೆ ಕೋಟಿ ರೂಪಾಯಿ ಕಳೆದುಕೊಂಡ ಗೋವಿಂದ ಬಾಬು ಪೂಜಾರಿ ಶಾಕ್ಗೆ ಒಳಗಾಗಿದ್ದರು. ಇದೆಲ್ಲವೂ ಸಹಜವಾಗಿ ನಡೆಯುತ್ತಿಲ್ಲವಲ್ಲ ಎಂಬ ಗುಮಾನಿ ಅವರಿಗೆ ಬಂದಿತ್ತು. ತನ್ನ ದೆಹಲಿಯ ಗೆಳೆಯನ ಮೂಲಕ ತನಿಖೆ ಮಾಡಿಸಿದಾಗ ವಿಶ್ವನಾಥ್ ಎಂಬ ವ್ಯಕ್ತಿಯೇ ಇಲ್ಲ ಎಂದು ಗೊತ್ತಾಗಿಬಿಟ್ಟಿದೆ. ಕೂಡಲೇ ಹಣವನ್ನು ವಾಪಸ್ ಕೇಳಿದಾಗ ತಾನು ಮೋಸ ಹೋಗಿರುವುದು ತಿಳಿದುಬಿಟ್ಟಿದೆ. ಅಷ್ಟರಲ್ಲಿ ಚುನಾವಣೆ ಬಂದಿದೆ. ಗುರುರಾಜ್ ಗಂಟೆ ಹೊಳಿಗೆ ಟಿಕೆಟ್ ಸಿಕ್ಕಿ, ಅವರ ಗೆಲುವು ಆಗಿದೆ. ತಿಂಗಳಿಂದ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆಗುತ್ತಿದ್ದರೂ, ಗೋವಿಂದ ಬಾಬು ಪೂಜಾರಿ ದೂರು ನೀಡಿರಲಿಲ್ಲ. ಈ ನಡುವೆ ವಾಟ್ಸಾಪ್ ಫೇಸ್ ಬುಕ್ ನಲ್ಲಿ ಅನಾಮಿಕ ಪತ್ರ ಒಂದು ಹರಿದಾಡಲು ಶುರು ಆಯ್ತು. ಕೋಟಿ ಕೋಟಿ ನುಂಗಿದ್ದು ಹೇಗೆ ಎಂಬ ಸವಿವರವಾದ ಕಥೆ ಎಲ್ಲೆಡೆ ಓಡಾಡಿತು. ಎಲ್ಲಾ ದಾಖಲೆಗಳನ್ನು ಸಂಗ್ರಹ ಮಾಡುತ್ತಿದ್ದ ಗೋವಿಂದ ಬಾಬು ಪೂಜಾರಿ ಬೆಂಗಳೂರಿನಲ್ಲಿ ಪ್ರಕರಣ ದಾಖಲಿಸಿದರು.
ಪ್ರಕರಣ ದಾಖಲಾಗುತ್ತಿದ್ದಂತೆ ಚೈತ್ರ ಅವರ ಇಡೀ ಗ್ಯಾಂಗ್ ರಾಜ್ಯದ ಅಲ್ಲಲ್ಲಿ ತಲೆಮರಿಸಿಕೊಂಡಿದೆ. ಸ್ವಿಚ್ ಆಫ್ ಮಾಡಿಕೊಂಡು ಓಡಾಡುತ್ತಿದ್ದ ಚೈತ್ರ ಉಡುಪಿ ಮಂಗಳೂರು, ಚಿಕ್ಕಮಗಳೂರು, ಬೆಂಗಳೂರು ಉತ್ತರ ಕರ್ನಾಟಕ ಎಂದು ಓಡಾಡಿದ್ದಾರೆ. ಯಾವ್ಯಾವುದೋ ನಂಬರ್ ಇಂದ ತನ್ನ ಗೆಳೆಯರನ್ನು ಸಂಪರ್ಕ ಮಾಡುತ್ತಿದ್ದಳು. ಚೈತ್ರ ಕುಂದಾಪುರಾಳ ಪಟಾಲಾಂನ ಮೇಲೆ ಕಣ್ಣಿಟ್ಟ ಸಿಸಿಬಿ ಪೊಲೀಸರು ಆಪ್ತ ನೊಬ್ಬನನ್ನು ವಶಕ್ಕೆ ಪಡೆದಿದ್ದರು. ಆ ಸಂದರ್ಭದಲ್ಲಿ ಚೈತ್ರ ಕುಂದಾಪುರ ಫೋನ್ ಬಂದಿದ್ದು ಉಡುಪಿಯ ಡಯಾನ ಸಮೀಪ ಅಪಾರ್ಟ್ಮೆಂಟ್ ಒಂದರಲ್ಲಿ ಅವಿತು ಕುಳಿತಿರುವ ವಿಚಾರ ಪೊಲೀಸರಿಗೆ ಗೊತ್ತಾಗಿದೆ. ಉಡುಪಿ ಕೃಷ್ಣಮಠಕ್ಕೆ ಕರೆಸಿದ ಪೊಲೀಸರು ಸ್ವಯಂಘೋಷಿತ ಹಿಂದೂ ನಾಯಕಿಯ ಹೆಡೆಮುರಿ ಕಟ್ಟಿದರು.

ಪ್ರಕರಣದ ಎಫ್ಐಆರ್ ನಲ್ಲಿ ಎಂಟು ಮಂದಿಯ ಹೆಸರು ದಾಖಲಾಗಿದೆ. ಆರು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಾಜಕೀಯದ ಆಸೆಗೆ ಬಲಿಯಾಗಿ ಎಷ್ಟು ಜನ ಕಾಸು ಕಳೆದುಕೊಂಡಿದ್ದಾರೋ ಗೊತ್ತಿಲ್ಲ. ಈ ಪ್ರಕರಣ ಬೆಳಕಿಗೆ ಬಂದ ನಂತರ ಮತ್ತಷ್ಟು ಟಿಕೆಟ್ ಡೀಲ್ಗಳು ಹೊರಬರುವ ಸಾಧ್ಯತೆ ಇದೆ.
ತಾನು ವಂಚನೆಗೊಳಗಾಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿ ಗೋವಿಂದ ಬಾಬು ಅವರು ಫೇಸ್ ಬುಕ್ಕಿನಲ್ಲಿ ಹಾಕಿರುವ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ. “ಒಬ್ಬರಿಗೆ ಸಾಧ್ಯ ಆದರೆ ಮಾತ್ರ ಸಹಾಯ ಮಾಡಿ. ಆಗದಿದ್ದರೆ ಮೋಸ ಮಾಡಬೇಡಿ.ನೀವು ಮಾಡಿದ ಸಹಾಯ ಅಥವಾ ಮೋಸದ ಪ್ರತಿಫಲ ದೇವರು ನಿಮಗೆ ನೀಡುತ್ತಾನೆ” ಎಂದು ಬರೆದುಕೊಂಡಿದ್ದರು. ಬುಧವಾರ ಹಾಕಿರುವ ಈ ಪೋಸ್ಟಿಗೆ ಅಪಾರ ಸಹಾನುಭೂತಿ ವ್ಯಕ್ತವಾಗಿದೆ.
ಸದ್ಯ ಚೈತ್ರ ಕುಂದಾಪುರ, ಶ್ರೀಕಾಂತ್, ರಮೇಶ್, ಗಗನ್, ಪ್ರಜ್ವಲ್ ಹಾಗೂ ಧನರಾಜ್ನನ್ನು ಸೆಪ್ಟೆಂಬರ್ 23ರವರೆಗೆ ಸಿಸಿಬಿ ಕಸ್ಟಡಿಗೆ ನೀಡಿ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ. ಅತ್ಯಂತ ಕಡು ಕುಟುಂಬದಲ್ಲಿ ಹುಟ್ಟಿದ ಈಕೆ ಏಕಾಏಕಿ ಕೋಟ್ಯಾಧೀಶೆ ಆಗುವ ಕನಸು ಕಂಡ ಕಥೆ ಇದು
ಚೈತ್ರಾ ಕುಂದಾಪುರ ಬಂಧನ ಸಂಘಪರಿವಾರದ ‘ಹಿಂದುತ್ವ, ರಾಷ್ಟ್ರೀಯತೆ’ಯ ಡೋಂಗಿತನವನ್ನು ಮತ್ತೆ ಬಯಲುಗೊಳಿಸಿದೆ: ಮುನೀರ್ ಕಾಟಿಪಳ್ಳ
ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ಚೈತ್ರ ಕುಂದಾಪುರ ಬಂಧನ ಸಂಘಪರಿವಾದ ‘ಹಿಂದುತ್ವ, ರಾಷ್ಟ್ರೀಯತೆ’ ಯ ಡೋಂಗಿತನವನ್ನು ಮತ್ತೆ ಬಯಲುಗೊಳಿಸಿದೆ ಎಂದು ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದು ಹೀಗೆ
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು ”ಚೈತ್ರಾ ಕುಂದಾಪರ ಎಂಬ ಎಳೆಯ ಪ್ರಾಯದ ಯುವತಿಯ ಬಾಯಿಯಲ್ಲಿ ಮುಸ್ಲಿಂ ದ್ವೇಷ, ಮತಾಂಧತೆ, ಸುಳ್ಳು ಇತಿಹಾಸದ ಕೊಳಕು ಭಾಷಣಗಳನ್ನು ಮಾಡಿಸಿ, ಆಕೆಗೆ ಕುಂದಾಪುರದ ಕಾಳಿ ಎಂಬ ಬಿರುದನ್ನು ದಯಪಾಲಿಸಿ ಐದಾರು ವರ್ಷಗಳ ಕಾಲ ಕನ್ನಡ ನಾಡಿನ ಉದ್ದಗಲಕ್ಕೂ ಹಲವು ಅನಾಹುತಗಳನ್ನು ಸೃಷ್ಟಿಸಲಾಯಿತು. ಆಕೆ ಸಾಕ್ಷಾತ್ ಧರ್ಮ ರಕ್ಷಣೆಗಾಗಿ ಅವತಾರ ಎತ್ತಿದ ಸಿಂಹಿಣಿ ಎಂಬಂತೆ ಬಿಂಬಿಸಲಾಯಿತು. ಕುಂದಾಪುರ, ಬೈಂದೂರು ಭಾಗದಲ್ಲಿ ಈಕೆಯ ಕೇಸರಿ ಸೀರೆಯುಟ್ಟ ಸಾಕ್ಷಾತ್ ಕಾಳಿಯಂತೆ ಕಾಣುವ ಚಿತ್ರಗಳುಲ್ಲ ಸ್ಟಿಕ್ಕರ್ ಗಳು ಉನ್ಮಾದಿತ ಯುವಕರ ಕಾರು, ಬೈಕುಗಳಲ್ಲಿ ರಾರಾಜಿಸಿದವು, ಫ್ಲೆಕ್ಸ್ ಗಳಲ್ಲಿ ವಿಜೃಂಭಿಸಿದವು. ದೂರದ ಗಂಗಾವತಿ, ಕೊಪ್ಪಳದಿಂದ ಹಿಡಿದು ಕುಂದಾಪುರ, ಸುಳ್ಯದವರಗೆ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಚುನಾವಣೆ ಗೆಲುವನ್ನು ಈಕೆಯ ಭಾಷಣದಿಂದ ಪ್ರಭಾವಿಸಿದವು.
ಈಗ, ಬಿಜೆಪಿ ಎಮ್ ಎಲ್ ಎ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಬಿಜೆಪಿ ಪಕ್ಷಕ್ಕೆ ಸೇರಿದ ಉದ್ಯಮಿಯೊಬ್ಬರಿಗೆ 7 ಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಚೈತ್ರಾ ಬಂಧನ ನಡೆದಿದೆ. ಚೈತ್ರಾ ಸಾರ್ವಜನಿಕ ಜೀವನಕ್ಕೆ ಆ ಮೂಲಕ ದೊಡ್ಡ ಹೊಡೆತ ಬಿದ್ದಿದೆ. ಸಂಘಪರಿವಾರ ಬಿಡಿ, “ಏನೂ ನಡೆದಿಲ್ಲ” ಎಂಬಂತೆ ನಡೆದುಕೊಳ್ಳುತ್ತದೆ.
ಕರ್ನಾಟಕ ರಾಜ್ಯ ಸರಕಾರ ಈ ಪ್ರಕರಣವನ್ನು ಚೈತ್ರಾ ಮತ್ತವಳ ಜೊತೆಗಿರುವ ಮೂರ್ನಾಲ್ಕು ಸಹಚರರ ವಂಚನೆಯಾಗಿಯಷ್ಟೆ ಕಾಣಬಾರದು. ಕಳೆದ ಚುನಾವಣೆಯ ಸಂದರ್ಭ ಟಿಕೆಟ್ ಹಂಚಿಕೆಯಲ್ಲಿ ನಡೆದಿರುವ ಇಂತಹ ಮತ್ತಷ್ಟು ಪ್ರಕರಣಗಳ ಕಡೆಗೂ ಬೆಳಕು ಚೆಲ್ಲಬೇಕು. ಚೈತ್ರಾ ಪರಿಚಯಿಸಿದ ಟಿಕೆಟ್ ಕೊಡಿಸುವ ಆರ್ ಎಸ್ ಎಸ್ ನ ಹೈಕಮಾಂಡ್ ಪ್ರಭಾವಿಗಳು ‘ನಕಲಿ ವ್ಯಕ್ತಿ’ ಗಳು ಎಂದು ತಿಪ್ಪೆ ಸಾರಿಸಬಾರದು. ಆ ವ್ಯಕ್ತಿಗಳ ಹಿನ್ನಲೆ, ರಾಜಕೀಯ, ಸಂಘಟನಾ ಸ್ಥಾನಮಾನಗಳು ಬಯಲಾಗಬೇಕು, ಅವರಿಗಿಂತ ಮೇಲಿನ ಜನಗಳು ಈ ವಂಚನೆಯಲ್ಲಿ ಶಾಮೀಲಾಗಿರುವ ಸಾಧ್ಯತೆಗಳು ಹೆಚ್ಚಿವೆ. ಅಂತವರೂ ಜೈಲಿಗೆ ಸೇರಬೇಕು, ಜನಸಾಮಾನ್ಯರಿಗೆ ವಾಸ್ತವ ಸತ್ಯ ತಿಳಿಯುವಂತಾಗಬೇಕು.
ಚೈತ್ರಾ ಕುಂದಾಪುರ ಎಲ್ಲರಿಗೂ ಗೊತ್ತಿರುವ ಮುಖ, ಚೈನ್ ಪ್ರಕರಣದಲ್ಲೇ ಆಕೆಯ ಕುರಿತಾದ ಭ್ರಮೆಗಳು ಕಳಚತೊಡಗಿತ್ತು. ಬಯಲಾಗಬೇಕಿರುವುದು ಸಭ್ಯತೆಯ, ಪ್ರಾಮಾಣಿಕತೆಯ, ಸತ್ಯ ಸಂಧತೆಯ ಮುಖವಾಡ ಧರಿಸಿ ಚೈತ್ರನಂತವರನ್ನು ಹುಟ್ಟು ಹಾಕಿ, ಕುಣಿಸಿ, ಬಳಸಿ ಸಮಾಜ ಕಂಟಕರಾಗಿ ಬೆಳೆಸಿ ಬಿಸಾಡುವವರ ಮುಖ ಬಯಲಾಗಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಇದೆಲ್ಲವೂ ಸುಳ್ಳು ಸುದ್ದಿ. ನನಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರೆ ಸುರಯ್ಯ ಅಂಜುಂ ಸ್ಪಷ್ಟನೆ

ಉದ್ಯಮಿಯೊಬ್ಬರಿಗೆ ಕೋಟ್ಯಾಂತರ ರೂ. ವಂಚನೆ ಪ್ರಕರಣದಲ್ಲಿ ಬಂಧಿತಳಾಗಿರುವ ಚೈತ್ರಾ ಕುಂದಾಪುರ ಅವರಿಗೆ ನಾನು ನಮ್ಮ ಮನೆಯಲ್ಲಿ ಯಾವುದೇ ಆಶ್ರಯ ಕೊಟ್ಟಿಲ್ಲ. ಇದೆಲ್ಲವೂ ಸುಳ್ಳು ಸುದ್ದಿ. ನನಗೂ ಪ್ರಕರಣಕ್ಕೂ ಕ್ಕೂ ಯಾವುದೇ ಸಂಬಂಧವಿಲ್ಲ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರೆ ಸುರಯ್ಯ ಅಂಜುಂ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಉಡುಪಿಯಲ್ಲಿ ಬುಧವಾರ ಮಾತನಾಡಿರುವ ಅವರು, ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಕಳೆದ 7 ದಿನಗಳಿಂದ ನಾನು ಚೈತ್ರಾಳಿಗೆ ಆಶ್ರಯ ಕೊಟ್ಟಿದ್ದೇನೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ವಂಚನೆ ಪ್ರಕರಣದ ಎಫ್‌ಐಆರ್ ದಾಖಲಾಗಿರುವುದೇ ಸೆಪ್ಟೆಂಬರ್ 8 ರಂದು. ಮತ್ತೆ ಹೇಗೆ 7 ದಿನಗಳಿಂದ ಆಶ್ರಯ ನೀಡುವುದಕ್ಕೆ ಸಾಧ್ಯ? ಸುಳ್ಳು ಸುದ್ದಿಯಿಂದ ನನಗೆ ಮಾನಸಿಕವಾಗಿ ನೋವು ಆಗಿದೆ ಎಂದರು.






