ಚಿನ್ನಾಭರಣ, ಎಲೆಕ್ಟ್ರಾನಿಕ್ ಅಂಗಡಿ ಮಾಲೀಕರನ್ನು ವಂಚಿಸಿದ ಖತರ್ನಾಕ್ ಮಹಿಳೆ ಬಂಧನ
Views: 150
ಕನ್ನಡ ಕರಾವಳಿ ಸುದ್ದಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರತಿಷ್ಠಿತ ಚಿನ್ನಾಭರಣಗಳ ಹಾಗೂ ಎಲೆಕ್ಟ್ರಾನಿಕ್ ಅಂಗಡಿಗಳಿಗೆ ಭೇಟಿ ಮಾಡಿ ತನ್ನ ಮಾತುಗಳಿಂದ ಅಂಗಡಿ ಮಾಲಕರನ್ನು ನಂಬಿಸಿ, ಬೆಲೆಬಾಳುವ ಸೊತ್ತುಗಳನ್ನು ಖರೀದಿಸಿ, ವಿವಿಧ ಬ್ಯಾಂಕ್ ಗಳ ಮಾನ್ಯತೆ ಇಲ್ಲದ ಚೆಕ್ ಗಳನ್ನು ನೀಡಿ ಮೋಸ ಮಾಡುತ್ತಿದ್ದ ಖತರ್ನಾಕ್ ವಂಚಕಿಯನ್ನು ಬರ್ಕೆ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರು ತಾಲೂಕು ಕುಪ್ಪೆ ಪದವು ಮುತ್ತೂರು ಗ್ರಾಮದ ಮುರಾ ಹೌಸ್ ನಿವಾಸಿ ರಮೀಜ್ ರಾಜ್ ಎಂಬಾತನ ಪತ್ನಿ ಫರಿದಾ ಬೇಗಂ ಯಾನೆ ಫರಿದಾ (28) ಬಂಧಿತ ಆರೋಪಿ. ರವಿವಾರ ಆಕೆಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದ್ದು, ನ್ಯಾಯಾಧೀಶರು ಆಕೆಗೆ ನ.3ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಕಳೆದ ಜೂ. 27ರಂದು ಫರಿದಾ ಬೇಗಂ ತನ್ನ ಪರಿಚಯದ ವ್ಯಕ್ತಿಯೊಬ್ಬರ ಮೂಲಕ ಮಂಗಳೂರಿನ ಕೊಡಿಯಾಲಬೈಲಿನ ಎಂಪಾಯರ್ ಮಾಲ್ ನ ಲ್ಯಾಪ್ ಟಾಪ್ ಮಳಿಗೆಯೊಂದರಿಂದ ಸುಮಾರು 1.98 ಲಕ್ಷ ರೂ. ಮೌಲ್ಯದ ಲ್ಯಾಪ್ ಖರೀದಿಸಿದ್ದಳು. ಆಕೆ ಆಪಲ್ ಕಂಪನಿಯ ಮ್ಯಾಕ್ ಬುಕ್ ಪ್ರೊ ಎ2141 ಲ್ಯಾಪ್ ಟಾಪ್, ಡೆಲ್ ಕಂಪನಿಯ ಡೆಲ್ 5440, ಆಪಲ್ ಕಂಪನಿಯ ಮ್ಯಾಕ್ ಬುಕ್ ಪ್ರೊ 2442 ಲ್ಯಾಪ್ ಟಾಪ್ ಗಳನ್ನು ಖರೀದಿಸಿದ್ದಳು. ಮಾನ್ಯತೆ ಇಲ್ಲದ ಚೆಕ್ ನೀಡಿ ವಂಚಿಸಿದ್ದಳು. ಸಂಸ್ಥೆಯ ಮಾಲಕರು ನೀಡಿದಂತೆ ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಬರ್ಕೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮೋಹನ ಕೊಟ್ಟಾರಿ ಅವರ ನೇತೃತ್ವದಲ್ಲಿ ಪ್ರಕರಣದ ತನಿಖಾಧಿಕಾರಿ ವಿನಾಯಕ ತೊರಗಲ್ ಮತ್ತು ಮಹಿಳಾ ಸಿಬಂದಿ ಕಾರ್ಯಾಚರಣೆ ನಡೆಸಿ, ಆರೋಪಿ ಮಹಿಳೆಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.






