ಇತರೆ

ಹೊಸಂಗಡಿ: ವಿದ್ಯುತ್ ಸಂಪರ್ಕದ ತಂತಿ ಬೇಲಿಗೆ ಸಿಲುಕಿ ಯುವಕ ಸಾವು ಪ್ರಕರಣ ಮರೆಮಾಚಲು ಯತ್ನ, ಆರೋಪ

Views: 63

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ಅಮಾಸೆಬೈಲು ಠಾಣಾ ವ್ಯಾಪ್ತಿಯ ಸಮೀಪದ ತೋಟದ ಸುತ್ತ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿದ್ದ ತಂತಿ ಬೇಲಿಗೆ ಸಿಲುಕಿ 26 ವರ್ಷದ ಯುವಕನೊಬ್ಬ ವಿದ್ಯುತ್ ಶಾಕ್‌ನಿಂದ ಮೃತಪಟ್ಟಿರುವ ಘಟನೆ ಅಮಾಸೆಬೈಲು ಹೊಸಂಗಡಿ ಗ್ರಾಮದ ಮಾತಿನಮಠದಲ್ಲಿ ನಡೆದಿದೆ.

ತಾರ್ಕಿಮಕ್ಕಿ ನಿವಾಸಿ ಕವೀನಾ (26) ಅವರು ಅಕ್ಟೋಬರ್ 2ರಂದು ಹೊಸಂಗಡಿಯ ಕೆಪಿಸಿ ಚೆಕ್‌ಪೋಸ್ಟ್ ಬಳಿಯಿಂದ ಕಾಣೆಯಾಗಿದ್ದರು. ಈ ಬಗ್ಗೆ ಅಮಾಸೆಬೈಲು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಅಕ್ಟೋಬರ್ 5ರಂದು ಕವೀನಾರ ಸಹೋದರ ಪ್ರವೀಣ ನಾಯ್ಕ ಅವರು ಹುಡುಕಾಟ ನಡೆಸುತ್ತಿದ್ದ ವೇಳೆ ಮಾತಿನಮಠದಲ್ಲಿರುವ ಶೇಖರ ನಾಯ್ಕ ಅವರ ಮನೆಯ ತೋಟದ ಬಳಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿರುವ ಮಾಹಿತಿ ಲಭಿಸಿದೆ. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮೃತದೇಹ ಕವೀನಾರದ್ದು ಎಂದು ಗುರುತಿಸಲಾಗಿದೆ.

ಶವವು ಅಂಗಾತ ಸ್ಥಿತಿಯಲ್ಲಿ ಬಿದ್ದಿದ್ದು, ಕೊಳೆತ ಸ್ಥಿತಿಯಲ್ಲಿ ಇತ್ತು. ಶವ ದೊರೆತ ಸ್ಥಳವು ಮೆನೆಗೆ ಹೋಗುವ ದಾರಿ ಅಲ್ಲದೆ ಇದ್ದು ಮತ್ತು ಶವದ ಕಾಲಿನಲ್ಲಿ ಚಪ್ಪಲಿ ಇರದೆ ಇರುವುದು ಕವೀನಾ ಅವರ ಸಾವಿನಲ್ಲಿ ಸಂಶಯ ಇರುವುದಾಗಿ ಸಹೋದರ ಪ್ರವೀಣ ನಾಯ್ಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ತನಿಖೆಯ ವೇಳೆ ತೋಟದ ಸುತ್ತಲಿನ ತಂತಿ ಬೇಲಿಗೆ ಮನೆಯ ವಿದ್ಯುತ್ ಸಂಪರ್ಕವನ್ನು ಅಕ್ರಮವಾಗಿ ನೀಡಲಾಗಿತ್ತು. ಇದೇ ತಂತಿ ಬೇಲಿಗೆ ತಾಗಿ ಕವೀನಾ ವಿದ್ಯುತ್ ಶಾಕ್‌ನಿಂದ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹ ಪತ್ತೆಯಾದ ಬಳಿಕ ತಂತಿ ಬೇಲಿಯ ಎರಡು ತಂತಿಗಳನ್ನು ತುಂಡು ಮಾಡಿ ಪಕ್ಕದ ಕಂಬಗಳಿಗೆ ಸುತ್ತಿ ಇಡುವ ಮೂಲಕ ಸಾವಿನ ಕಾರಣವನ್ನು ಮರೆಮಾಚಲು ಯತ್ನಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಈ ಸಂಬಂಧ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

 

Related Articles

Back to top button
error: Content is protected !!