ಯುವಜನ

ಆನ್‌ಲೈನ್ ಫ್ರೀ ಫೈರ್ ಗೇಮ್‌ಗಾಗಿ 8ನೇ ತರಗತಿ ವಿದ್ಯಾರ್ಥಿಯಿಂದ ₹4.11 ಲಕ್ಷ ಹಣ ಪಡೆದ ಆರೋಪ: ನೊಂದ ಬಾಲಕ ಆತ್ಮಹತ್ಯೆ 

Views: 56

ಕನ್ನಡ ಕರಾವಳಿ ಸುದ್ದಿ: ಆನ್‌ಲೈನ್ ಗೇಮ್‌ಗಾಗಿ ಐಡಿ ನೀಡುವುದಾಗಿ ಹೇಳಿ 13 ವರ್ಷದ ಬಾಲಕನಿಂದ ಹಂತ ಹಂತವಾಗಿ ₹4.11 ಲಕ್ಷ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಣಕ್ಕಾಗಿ ಒತ್ತಡ ಹಾಗೂ ಬೆದರಿಕೆ ಹಾಕಿದ ಆರೋಪದ ಬೆನ್ನಲ್ಲೇ ಮನನೊಂದ ಬಾಲಕ ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕನನ್ನು ಮನೋಜ್ ಟಿ.ಆರ್. (13) ಎಂದು ಗುರುತಿಸಲಾಗಿದೆ. ಮನೋಜ್ ಮಾಚೋನಾಯಕನಹಳ್ಳಿ ಗ್ರಾಮದ ಖಾಸಗಿ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.

ಮನೋಜ್‌ಗೆ ಫ್ರೀ ಫೈರ್ (Free Fire) ಗೇಮ್ ಐಡಿ ನೀಡುವುದಾಗಿ ಹೇಳಿ ಅದೇ ಗ್ರಾಮದ ಮನು ಸೇರಿದಂತೆ ಆರು ಮಂದಿ ಹಣ ಪಡೆದಿದ್ದಾರೆ ಎಂಬ ಆರೋಪವಿದೆ. ಮೊದಲಿಗೆ ಬಾಲಕನಿಂದ ₹6,000 ಪಡೆದ ಆರೋಪಿಗಳು, ಬಳಿಕ ಗೇಮ್‌ನಲ್ಲಿ ಹೆಚ್ಚಿನ ಮಟ್ಟದ ಐಡಿ ನೀಡಿರುವುದಾಗಿ ಹೇಳಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಆರೋಪಿಗಳ ಒತ್ತಡಕ್ಕೆ ಒಳಗಾಗಿ ಬಾಲಕ ಮನೆಯಲ್ಲಿದ್ದ ಹಣವನ್ನು ಹಂತ ಹಂತವಾಗಿ ನೀಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ತಂದೆ-ತಾಯಿಗೆ ತಿಳಿಯದಂತೆ ಮನೆಯಲ್ಲಿದ್ದ ಸುಮಾರು ₹4 ಲಕ್ಷ ಹಣ ನೀಡಿದ್ದಾನೆ ಎನ್ನಲಾಗಿದೆ.

ಇನ್ನಷ್ಟು ಹಣ ನೀಡುವಂತೆ ಆರೋಪಿಗಳು ಒತ್ತಡ ಹೇರಿದ್ದು, ಹಣ ನೀಡದಿದ್ದರೆ ಬಾಲಕ ಹಾಗೂ ಆತನ ಸಹೋದರನಿಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಕುಟುಂಬದವರು ಆರೋಪಿಸಿದ್ದಾರೆ. ಈ ವಿಚಾರ ಸೆಪ್ಟೆಂಬ‌ರ್ 6ರಂದು ಬಾಲಕನ ತಂದೆಗೆ ತಿಳಿದುಬಂದಿದ್ದು, ಬಳಿಕ ಮಗನಿಗೆ ಧೈರ್ಯ ತುಂಬಿ ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ.

ಸೆಪ್ಟೆಂಬರ್ 7ರಂದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬಾಲಕ ಮೃತಪಟ್ಟಿದ್ದಾನೆ. ಘಟನೆಯ ಬಳಿಕ ಸ್ಥಳೀಯರು ಆರೋಪಿಗಳೆಂದು ಹೇಳಲಾದ ಐವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮನು, ಬೊಮ್ಮಲಿಂಗ, ಮಣಿ, ಸಂಜು ಹಾಗೂ ಯಶವಂತ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮಗನ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡುವಂತೆ ಮೃತ ಬಾಲಕನ ತಂದೆ ರೇವಣ್ಣ ದೂರು ನೀಡಿದ್ದಾರೆ. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Articles

Back to top button
error: Content is protected !!