ಚಳಿಗಾಲದಲ್ಲಿ ಮಕ್ಕಳಿಗೆ ಹರಡುವ ಸಾಂಕ್ರಾಮಿಕ ರೋಗ “ಕೆಪ್ಪಟ್ರಾಯ”

Views: 45
ಕೆಪ್ಪಟ್ರಾಯ ಖಾಯಿಲೆಯ ಹೆಸರು ಬಹುತೇಕರಿಗೆ ಗೊತ್ತಿದೆ. ಹಲವು ವರ್ಷಗಳಿಂದ ಈ ಕಾಯಿಲೆಯ ಉಪಟಳ ಇರಲಿಲ್ಲ. ಮಕ್ಕಳಿಗೆ ರೋಗ ಬಾರದಂತೆ ವ್ಯಾಕ್ಸಿನ್ ಹಾಕುವ ಪದ್ಧತಿ ರೂಡಿಯಲ್ಲಿತ್ತು. ಆದರೆ ಕಳೆದ ಹತ್ತು ವರ್ಷಗಳಿಂದ ಕೆಪ್ಪಟ್ರಾಯ ವ್ಯಾಕ್ಸಿನ್ ಸರಕಾರಿ ಆಸ್ಪತ್ರೆಯಲ್ಲಿ ಲಭ್ಯವಿಲ್ಲ. ಆರೋಗ್ಯ ಇಲಾಖೆ ಈ ವ್ಯಾಕ್ಸಿನ್ ರದ್ದುಗೊಳಿಸಿತ್ತು. ಹತ್ತು ವರ್ಷಗಳ ಬಳಿಕ ಮತ್ತೆ ಈ ಕಾಯಿಲೆ ಕಾಣಿಸಿಕೊಂಡಿದೆ. ಇದು ಮಾರಣಾಂತಿಕ ಅಥವಾ ಅಪಾಯಕಾರಿ ಕಾಯಿಲೆ ಅಲ್ಲದೇ ಇದ್ದರೂ ಇದು ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕಾರಣ ಕಾಯಿಲೆ ಕಾಣಿಸಿಕೊಂಡ ಮಕ್ಕಳು ಐದಾರು ದಿನಗಳ ಕಾಲ ವಿಪರೀತ ನೋವಿನಿಂದ ನರಳಬೇಕಾದ ಅನಿವಾರ್ಯತೆ ಇದೆ.
ಕೆಪ್ಪಟ್ರಾಯ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಒಂದು ಮಗುವಿನಲ್ಲಿ ಕಾಣಿಸಿಕೊಂಡರೆ ಇನ್ನೊಂದು ಮಗುವಿಗೂ ವೈರಸ್ ದಾಳಿ ಮಾಡುತ್ತದೆ. 10 ರಿಂದ 15 ದಿನದೊಳಗೆ ವೈರಸ್ ಹರಡಲು ಸಮಯವನ್ನು ತೆಗೆದುಕೊಳ್ಳುತ್ತದೆ. ದೊಡ್ಡವರಲ್ಲಿ ಈ ಕಾಯಿಲೆ ಅಷ್ಟಾಗಿ ಹರಡುವುದಿಲ್ಲ, ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಮಕ್ಕಳಲ್ಲಿ ಬಹುಬೇಗನೆ ಕಾಣಿಸಿಕೊಳ್ಳುತ್ತದೆ.
ರೋಗದ ಲಕ್ಷ ಣಗಳು
ರೋಗ ಆರಂಭಕ್ಕೆ ಮುಂಚೆ ವಿಪರೀತ ಜ್ವರ, ತಲೆನೋವು ಮತ್ತು ಗಂಟಲು ನೋವು ಮೊದಲಿಗೆ ಉಂಟಾಗುತ್ತದೆ. ಬಳಿಕ ಕಿವಿಯ ಗ್ರಂಥಿಯ ಬಳಿ ನೋವು ಕಾಣಿಸಿಕೊಳ್ಳುತ್ತದೆ. ಆಹಾರ ಸೇವಿಸುವಾಗಲೂ ಗಂಟಲು ನೋವು ಉಂಟಾಗುತ್ತದೆ ಕ್ರಮೇಣ ಕಿವಿಯ ಬಳಿ ಊತ ಬರುತ್ತದೆ. ಮತ್ತೆ ಐದು ದಿನಗಳ ಕಾಲ ದವಡೆ ದಪ್ಪಗಾಗಿ ವಿಪರೀತ ನೋವು ಉಂಟುಮಾಡುತ್ತದೆ. ಬಾಯಲ್ಲಿ ಲಾಲಾರಸವನ್ನು ಉತ್ಪತ್ತಿಮಾಡುವ ಗ್ರಂಥಿಗಳಿಗೆ ವೈರಸ್ ನೇರವಾಗಿ ಅಟ್ಯಾಕ್ ಮಾಡುತ್ತದೆ. ಗ್ರಂಥಿಗಳಲ್ಲಿ ಸೋಂಕು ತಗುಲಿ ಕಾಯಿಲೆ ಉಂಟಾಗುತ್ತದೆ.
ಎಂಎಂಆರ್ ಲಸಿಕೆ ಲಸಿಕೆ ಲಭ್ಯ
ಸೋಂಕು ತಗುಲದಂತೆ ಮಕ್ಕಳಿಗೆ ಒಂದು ವರ್ಷ ನಾಲ್ಕು ತಿಂಗಳ ಪ್ರಾಯದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಿಸಿಕೊಳ್ಳಬಹುದು. ಇದಕ್ಕೆ ಎಂಎಂಆರ್ ಲಸಿಕೆ ಎಂದು ಕರೆಯಲಾಗುತ್ತದೆ. ಸರಕಾರಿಆಸ್ಪತ್ರೆ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಲಭ್ಯವಿಲ್ಲ. ಮಕ್ಕಳ ತಜ್ಞರ ಬಳಿ ಹೇಳಿ ಹಾಕಿಸಿಕೊಳ್ಳಬೇಕಾಗುತ್ತದೆ. ಲಸಿಕೆ ಹಾಕಿಸಿಕೊಂಡಲ್ಲಿ ಮಕ್ಕಳಿಗೆ ಸೋಂಕು ಹರಡುವುದಿಲ್ಲ ಎನ್ನುತ್ತಾರೆ ವೈದ್ಯರು.
ಕೆಪ್ಪಟವು ಕೆಲವೊಮ್ಮೆ ಮಿದುಳಿನ ಸೋಂಕನ್ನುಂಟು ಮಾಡಬಹುದು ಮತ್ತು ಮಿದುಳಿನ ಉರಿಯೂತ (ಎನ್ಸಿಫಾಲಿಟಿಸ್)ಕ್ಕೆ ಕಾರಣವಾಗಬಹುದು ಮತ್ತು ಇದು ಗಂಭೀರ ರೋಗವಾಗಿದ್ದು,ಮಾರಣಾಂತಿಕವೂ ಆಗಬಹುದು. ಪುರುಷರಲ್ಲಿ ವೃಷಣಗಳು ಮಮ್ಸ್ ಸೋಂಕಿಗೊಳಗಾದರೆ ಸಂತಾನ ಶಕ್ತಿ ನಷ್ಟವಾಗಬಹುದು.
ಕೆಪ್ಪಟ ಸಾಂಕ್ರಾಮಿಕ ರೋಗವಾಗಿದ್ದು,ಇದನ್ನುಂಟು ಮಾಡುವ ವೈರಾಣು ಸೋಂಕುಪೀಡಿತ ವ್ಯಕ್ತಿಯ ಸಂಪರ್ಕದಿಂದಾಗಿ (ದೈಹಿಕ ಸ್ಪರ್ಶ,ಎಂಜಲು,ಉಸಿರಾಟ) ಇನ್ನೊಬ್ಬ ವ್ಯಕ್ತಿಗೆ ಹರಡುತ್ತದೆ. 2ರಿಂದ 12 ವರ್ಷ ಪ್ರಾಯದ ಮಕ್ಕಳು ಈ ಸೋಂಕಿಗೆ ಗುರಿಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ವಯಸ್ಸಾದವರಲ್ಲಿ ಪ್ಯಾರೊಟಿಡ್ ಗ್ರಂಥಿಗಳ ಜೊತೆಗೆ ವೃಷಣಗಳು, ಮೇದೋಜ್ಜೀರಕ ಗ್ರಂಥಿ ಮತ್ತು ನರಮಂಡಲದಂತಹ ಇತರ ಅಂಗಾಂಗಗಳೂ ಈ ಸೋಂಕಿಗೊಳಗಾಗಬಹುದು. ಸಾಮಾನ್ಯವಾಗಿ ವೈರಾಣು ಸೋಂಕು ಉಂಟಾದ 12ರಿಂದ 14 ದಿನಗಳಲ್ಲಿ ರೋಗದ ಲಕ್ಷಣಗಳು ಪ್ರಕಟವಾಗುತ್ತವೆ
ಗಂಡು ಮಗುವಿನಲ್ಲಿ ಕೆಪ್ಪಟ್ರಾಯ ಕಾಯಿಲೆ ಕಾಣಿಸಿಕೊಂಡು ಅದು ವಿಪರೀತವಾದಲ್ಲಿ ವೃಷಣಕ್ಕೂ ಸೋಂಕು ತಗಲುವ ಸಾಧ್ಯತೆ ಇದೆ. ವೃಷಣ ದಪ್ಪಗಾಗುವ ಲಕ್ಷ ಣಗಳೂ ಇದೆಯಾದರೂ ಜೀವಕ್ಕೆ ಅಪಾಯವಿಲ್ಲ. ಸೂಕ್ತ ರೀತಿಯಲ್ಲಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ಈ ಕಾಯಿಲೆಯಿಂದ ಜೀವಕ್ಕೆ ಯಾವುದೇ ಅಪಾಯವಿಲ್ಲ ಎನ್ನುತ್ತಾರೆ ವೈದ್ಯರು.
ಕಾಯಿಲೆ ಕಾಣಿಸಿಕೊಂಡಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸದೇ ಇರುವುದೇ ಸೂಕ್ತ. 6 ದಿನಗಳ ಕಾಲ ರೆಸ್ಟ್ ಪಡೆಯಬೇಕಾಗುತ್ತದೆ. ಶಾಲೆಗೆ ಕಳುಹಿಸಿದ್ದಲ್ಲಿ ಇತರೆ ಮಕ್ಕಳಿಗೆ ಹರಡುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕೆಯಾಗಿ ಮನೆಯಲ್ಲೇ ಕೂರಿಸುವುದು ಉತ್ತಮ.
ಕೆಪ್ಪಟ್ರಾಯ ಚಳಿಗಾಲದಲ್ಲಿ ಮಾತ್ರ ಹರಡುವ ವೈರಸ್ ಕಾಯಿಲೆ. ಇದರಿಂದ ಜೀವಕ್ಕೆ ಅಪಾಯವಿಲ್ಲ. ಆದರೆ ವಿಪರೀತ ನೋವು ಕೊಡುತ್ತದೆ. ಸರಕಾರಿ ಆಸ್ಪತ್ರೆಯಲ್ಲಿ ಈ ಮೊದಲು ಇದಕ್ಕೆ ವ್ಯಾಕ್ಸಿನ್ ದೊರೆಯುತ್ತಿತ್ತು. ಹತ್ತು ವರ್ಷಗಳ ಹಿಂದೆ ಕಾಯಿಲೆ ಇಲ್ಲ ಎಂಬ ಕಾರಣಕ್ಕೆ ಆರೋಗ್ಯ ಇಲಾಖೆ ಅದನ್ನು ರದ್ದು ಮಾಡಿದೆ. ಖಾಸಗಿಯಾಗಿ ಔಷಧಿಗಳು ಲಭ್ಯ. ಕೆಪ್ಪಟ್ರಾಯ ಕಾಣಿಸಿಕೊಂಡಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು.
ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಕೆಪ್ಪಟ್ರಾಯ (ಮಂಗನಬಾವು- ಮಂಸ್ಸ್) ರೋಗ ಕಾಣಿಸಿಕೊಳ್ಳುತ್ತಿದೆ.ಮಂಗಳೂರು ಮುಡಿಪು ಸಹಿತ ಜಿಲ್ಲೆಯ ಅಲ್ಲಲ್ಲಿ ಕಂಡು ಬಂದಿದೆ.
ಈ ರೋಗವು ವೈರಸ್ ಹರಡುವಿಕೆಯಿಂದ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಯಾವ ಯಾವ ಕಡೆಗಳಲ್ಲಿ ಕೆಪ್ಟ್ರಾಯ ರೋಗ ಹೆಚ್ಚು ಇದೆ ಎಂಬ ಮಾಹಿತಿ ಪಡೆದು ಮುನ್ನೆಚ್ಚರಿಕೆ ಸೂಚಿಸುತ್ತೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ತಿಮ್ಮಯ್ಯ ತಿಳಿಸಿದ್ದಾರೆ.