ಘಟನೆ ಹಿಂದಿನ ಸತ್ಯ ಬಯಲಿಗೆ ಚಿನ್ನಯ್ಯನ ಮಂಪರು ಪರೀಕ್ಷೆಗೆ ಸೌಜನ್ಯ ತಾಯಿ ಆಗ್ರಹ

Views: 102
ಕನ್ನಡ ಕರಾವಳಿ ಸುದ್ದಿ: ಬುರುಡೆ ಪ್ರಕರಣದಲ್ಲಿ ಇದೀಗ ಸೌಜನ್ಯ ಕುಟುಂಬ ಪ್ರವೇಶಿಸಿದ್ದು, ಚಿನ್ನಯ್ಯನ ಮಂಪರು ಪರೀಕ್ಷೆಯಿಂದ ಸೌಜನ್ಯ ಕೊಲೆ ಪ್ರಕರಣದ ಸತ್ಯಾಂಶ ಹೊರಬರಲಿದೆ ಎಂದು ಆಗ್ರಹಿಸಿದ್ದಾರೆ.
ಗುರುವಾರ ಸೌಜನ್ಯ ತಾಯಿ ಕುಸುಮಾವತಿ ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಅವರಿಗೆ, 2012ರಲ್ಲಿ ಧರ್ಮಸ್ಥಳದಲ್ಲಿ ನಡೆದಿದ್ದ 17 ವರ್ಷದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಸಂತ್ರಸ್ತೆಯ ತಾಯಿ ಕುಸುಮಾವತಿ ಮತ್ತೆ ಮನವಿ ಸಲ್ಲಿಸಿದ್ದಾರೆ. ಹಲವು ಶವಗಳನ್ನು ಹೂತಿಟ್ಟಿದ್ದೆ ಎಂದು ಹೇಳಿಕೆ ನೀಡಿದ್ದ ಅಪರಿಚಿತ ಸಾಕ್ಷಿ-ದೂರುದಾರನ ಮಂಪರು ಪರೀಕ್ಷೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಸೌಜನ್ಯ ಹಲ್ಲೆ ಮತ್ತು ಕೊಲೆಯ ಬಗ್ಗೆ ತಿಳಿದಿದ್ದಕ್ಕಾಗಿ ದೂರುದಾರರು 2014ರಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ ಪ್ರಮುಖ ವ್ಯಕ್ತಿಯಿಂದ ಜೀವ ಬೆದರಿಕೆ ಎದುರಿಸಿದ ನಂತರ ಧರ್ಮಸ್ಥಳದಿಂದ ಪರಾರಿಯಾಗಿದ್ದರು ಎಂದು ಚಿನ್ನಯ್ಯನ ಸಹೋದರಿ ರತ್ನಾ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಚಿನ್ನಯ್ಯನ ಮಂಪರು ಪರೀಕ್ಷೆ ಮಾಡುವುದರಿಂದ ಘಟನೆಯ ಹಿಂದಿನ ಸಂಪೂರ್ಣ ಸತ್ಯ ಮತ್ತು ಅದರ ಹಿಂದೆ ಇರುವವರನ್ನು ಬಹಿರಂಪಡಿಸಬಹುದು ಎಂದು ಕುಟುಂಬವು ಒತ್ತಾಯಿಸುತ್ತದೆ. ಕರ್ನಾಟಕ ಸರ್ಕಾರ ಮತ್ತು ಎಸ್‌ಐಟಿ ನ್ಯಾಯವನ್ನು ಖಾತ್ರಿ ಪಡಿಸುತ್ತದೆ ಎಂಬ ವಿಶ್ವಾಸದಲ್ಲಿರುವುದಾಗಿ ಕುಸುಮಾವತಿ ಹೇಳಿದ್ದಾರೆ.
ಹಿಂದೆ ಅನೇಕ ಶವಗಳನ್ನು ಹೂತು ಹಾಕಲಾಗಿದ್ದ ಸ್ಥಳದಲ್ಲಿಯೇ ಸೌಜನ್ಯಳ ಶವ ಪತ್ತೆಯಾಗಿತ್ತು. ಅಪರಾಧ ಮುಚ್ಚಿಹಾಕುವ ಭಾಗವಾಗಿ ಆಕೆಯ ದೇಹವನ್ನು ಹೂತು ಹಾಕಲು ಪ್ರಯತ್ನ ನಡೆದಿರಬಹುದು ಎಂಬ ಗಂಭೀರ ಅನುಮಾನವನ್ನು ಇದು ಹುಟ್ಟುಹಾಕುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.