ಸಾಂಸ್ಕೃತಿಕ

ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ತ್ರೀ ಪಾತ್ರಧಾರಿ ಶಶಿಕಾಂತ್ ಶೆಟ್ಟಿ ಚೇತರಿಕೆ 

Views: 367

ಕನ್ನಡ ಕರಾವಳಿ ಸುದ್ದಿ: ಯಕ್ಷಗಾನ ಕ್ಷೇತ್ರದಲ್ಲಿ ‘ಯಕ್ಷಚಂದ್ರಕೆ’ ಎಂದೇ ಪ್ರಸಿದ್ಧರಾಗಿರುವ ಕಳೆದ ಎರಡು ಮೂರು ದಿನಗಳಿಂದ ತೀವ್ರ ಅಸ್ವಸ್ಥರಾಗಿ ಮಣಿಪಾಲ ಆಸ್ಪತ್ರೆಯಲ್ಲಿ ತೀವ್ರ ನೀಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಶಿಕಾಂತ್ ಶೆಟ್ಟಿ ಅವರು ಚಿಕಿತ್ಸೆಗೆ ಸ್ಪಂದಿಸಿ ಚೇತರಿಸಿ ಕೊಂಡಿದ್ದಾರೆ ಎಂದು ಆಸ್ಪತ್ರೆಯ ಮೂಲದಿಂದ ತಿಳಿದು ಬಂದಿದೆ.

ಯಕ್ಷ ಅಭಿಮಾನಿಗಳ ಹರಕೆಯ ಫಲವಾಗಿ ಶಶಿಕಾಂತ್ ಶೆಟ್ಟಿಯವರು ಚೇತರಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ ತಂದಿದೆ.

ಯಕ್ಷಗಾನದಲ್ಲಿ ಮಹಿಳಾ ಪಾತ್ರಗಳಿಗೆ ಹೆಸರುವಾಸಿಯಾಗಿರುವ ಶಶಿಕಾಂತ್, ಇತ್ತೀಚೆಗೆ ಅಭಿಮಾನಿಗಳ ಬೇಡಿಕೆಯ ಮೇರೆಗೆ ಪುರುಷ ಪಾತ್ರಗಳನ್ನು ಸಹ ನಿರ್ವಹಿಸುತ್ತಿದ್ದಾರೆ. ‘ಭೀಷ್ಮ ವಿಜಯ’ ಕಥೆಯ ಅವರ ‘ಅಂಬೆ’ ಪಾತ್ರವು ಕಾಸರಗೋಡಿನಿಂದ ಉತ್ತರ ಕನ್ನಡ ಜಿಲ್ಲೆಗಳವರೆಗಿನ ತೆಂಕು ಮತ್ತು ಬಡಗು ಯಕ್ಷಗಾನದಲ್ಲಿ ಸಾಟಿಯಿಲ್ಲ.

‘ಈಶ್ವರಿ’ ಮತ್ತು ‘ಪರಮೇಶ್ವರಿ’ ಪಾತ್ರಗಳಲ್ಲಿನ ಅತ್ಯುತ್ತಮ ಅಭಿನಯದಿಂದಾಗಿ ಶಶಿಕಾಂತ್ ಹೆಸರು ಗಳಿಸಿದರು. ಅವರ ಅಭಿಮಾನಿಗಳು ‘ದಾಕ್ಷಾಯಿಣಿ’, ‘ಚಂದ್ರಮತಿ’, ‘ಸಾವಿತ್ರಿ’, ‘ದೇವಯಾನಿ’ ಮತ್ತು ‘ಸತ್ಯಭಾಮ’ ಪಾತ್ರಗಳನ್ನು ಅಪಾರವಾಗಿ ಇಷ್ಟಪಡುತ್ತಾರೆ.

ಅವರ ಹಲವಾರು ಅನುಯಾಯಿಗಳ ಬೇಡಿಕೆಯ ಮೇರೆಗೆ ಅವರು ‘ರಾಮ’, ‘ಕೃಷ್ಣ’, ‘ವಾಲಿ’ ಮತ್ತು ‘ಹನುಮಂತ’ ನಂತಹ ಪುರುಷ ಪಾತ್ರಗಳನ್ನು ಸಹ ನಿರ್ವಹಿಸುತ್ತಿದ್ದಾರೆ.

ಸಿಗಂದೂರು, ಸಾಲಿಗ್ರಾಮ, ಸೌಕೂರು ಮತ್ತು ಮಡಾಮಕ್ಕಿಯಂತಹ ಇತರ ತಂಡಗಳು ಅವರ ಸೇವೆಯನ್ನು ಪಡೆಯುತ್ತವೆ.

“ಖ್ಯಾತ ಕಲಾವಿದರಾದ ಚಿಟ್ಟಾಣಿ ಮತ್ತು ಕಣ್ಣಿಮನೆ ಅವರಂತಹ ಪಾತ್ರಗಳ ಮೂಲಕ ಕಲಾವಿದರನ್ನು ಗುರುತಿಸಬೇಕು. ಒಬ್ಬ ಕಲಾವಿದ ಪ್ರೇಕ್ಷಕರ ಕ್ಷಣಿಕ ಆಕರ್ಷಣೆ ಅಥವಾ ಚಪ್ಪಾಳೆ ತಟ್ಟುವಿಕೆಯನ್ನು ನಿರೀಕ್ಷಿಸಬಾರದು. ನಟ ನಿರ್ವಹಿಸುವ ಪಾತ್ರವನ್ನು ನೋಡಬೇಕು, ಪಾತ್ರ ಸಾಯಬಾರದು. ಪಾತ್ರ ಸತ್ತರೆ, ಕಲೆ ಮತ್ತು ಕಲಾವಿದ ಎರಡೂ ಸಾಯುತ್ತವೆ” ಎಂದು ಅವರು ಅಭಿಪ್ರಾಯಪಡುತ್ತಾರೆ.

ಹೆರಂಜಾಲು ಭಾಗವತರ ಸೂಚನೆಯಂತೆ 2003-2004ರಲ್ಲಿ ಸಾಲಿಗ್ರಾಮಕ್ಕೆ ಮೇಳಕ್ಕೆ ಸೇರಿದ ಶಶಿಕಾಂತ ಶೆಟ್ಟರು ಕಳೆದ ಹದಿನೆಂಟು ವರ್ಷಗಳಿಂದ ಶ್ರೀ ಕಿಶನ್ ಕುಮಾರ್ ಹೆಗಡೆ ಅವರ ಸಂಚಾಲಕತ್ವದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಶ್ರೀ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಅವರ ಜತೆ ತಿರುಗಾಟ. ಡಾ. ವೈ. ಚಂದ್ರಶೇಖರ ಶೆಟ್ಟಿ ವಿರಚಿತ ಪ್ರಸಂಗ ‘‘ಈಶ್ವರಿ ಪರಮೇಶ್ವರಿ’’ ಪ್ರಸಂಗದ ಈಶ್ವರಿ ಎಂಬ ಅತ್ತೆಯ ಪಾತ್ರ ಖ್ಯಾತಿಯನ್ನು ತಂದುಕೊಟ್ಟಿತ್ತು. ಪರಮೇಶ್ವರಿಯಾಗಿ ಯಲಗುಪ್ಪರ ಅಭಿನಯ. ಯಲಗುಪ್ಪ- ಕಾರ್ಕಳ ಜೋಡಿಯು ಖ್ಯಾತವಾಗಿ ಅವರಿಗೆ ತಾರಾಮೌಲ್ಯವನ್ನು ತಂದುಕೊಟ್ಟಿತ್ತು. ಗರತಿ, ಗಯ್ಯಾಳಿ ಪಾತ್ರದಲ್ಲಿ ಇಬ್ಬರೂ ರಂಜಿಸಿದ್ದರು.

ಈ ಜೋಡಿಯು ಅದೇ ಖ್ಯಾತಿ, ಬೇಡಿಕೆಯನ್ನು ಈಗಲೂ ಉಳಿಸಿಕೊಂಡಿದೆ. ಮೂರೇ ವರ್ಷಗಳಲ್ಲಿ ಸಾಲಿಗ್ರಾಮ ಮೇಳದ ಮುಖ್ಯ ಸ್ತ್ರೀಪಾತ್ರಧಾರಿಯಾಗಿ ಭಡ್ತಿ. ಮಳೆಗಾಲದ ಪ್ರದರ್ಶನಗಳಲ್ಲೂ ಬಡಗುತಿಟ್ಟಿನ ಹಿರಿಯ ಕಲಾವಿದರ ಜತೆ ಅಭಿನಯ. ಕೀಚಕವಧೆ ಪ್ರಸಂಗದಲ್ಲಿ ಚಿಟ್ಟಾಣಿಯವರ ಕೀಚಕನಿಗೆ ಸೈರಂಧ್ರಿಯಾಗಿ ಅಭಿನಯಿಸಿದ್ದರು. ಅಂದು ಜಲವಳ್ಳಿ ವೆಂಕಟೇಶ ರಾಯರು ವಲಲ ಪಾತ್ರವನ್ನು ಮಾಡಿದ್ದರು. ಗೋಡೆ ನಾರಾಯಣ ಹೆಗಡೆಯವರ ಬ್ರಹ್ಮನಿಗೆ ಶಾರದೆಯಾಗಿ ಅಭಿನಯಿಸುವ ಅವಕಾಶವೂ ಸಿಕ್ಕಿತ್ತು. ಅಲ್ಲದೆ ಅನೇಕ ವರ್ಷಗಳಿಂದ ಬಡಗು ತೆಂಕಿನ ಹೆಚ್ಚಿನ ಕಲಾವಿದರ ಜತೆ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಶಿಕಾಂತರು ಪ್ರತಿಯೊಂದು ಪಾತ್ರವನ್ನೂ ತನ್ನ ಕಲ್ಪನೆಯಿಂದ ಕೆತ್ತಿ ಚಿತ್ರಿಸಲು ಪ್ರಯತ್ನಿಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.

Related Articles

Back to top button