‘ಕೊರಗಜ್ಜ’ ಚಿತ್ರದ ಹಾಡಿನ ಶೂಟಿಂಗ್ ವೇಳೆ ಗೂಂಡಾವರ್ತನೆ
Views: 109
ಕನ್ನಡ ಕರಾವಳಿ ಸುದ್ದಿ: ಸೋಮೇಶ್ವರ ಕಡಲ ತೀರದಲ್ಲಿ ‘ಗುಳಿಗ ಗುಳಿಗ’ ಹಾಡಿನ ಚಿತ್ರೀಕರಣ ಸಂದರ್ಭ ನಡೆದ ಗೂಂಡಾಗಳ ದಾಳಿ ಬಗ್ಗೆ ನಿರ್ದೇಶಕ ಸುಧೀರ್ ಅತ್ತಾವರ್ ಮಾತನಾಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಮೂಡಿಬಂದ ದೈವಾರಾಧನೆ ಕುರಿತಾದ ಸಿನಿಮಾ ‘ಕಾಂತಾರ ಚಾಪ್ಟರ್ 1’ ಅಭೂತಪೂರ್ವ ಯಶಸ್ಸು ಕಂಡಿದೆ. ಇದೀಗ ದೈವ ‘ಕೊರಗಜ್ಜ’ ಶೀರ್ಷಿಕೆಯಲ್ಲಿ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದು, ಚಿತ್ರತಂಡ ಪ್ರಚಾರದಲ್ಲಿ ಭಾಗಿಯಾಗಿದೆ.
ಕೊರಗಜ್ಜ ಚಿತ್ರದಲ್ಲಿ ದೈವ ಗುಳಿಗನ ಕುರಿತಾದ ಹಾಡನ್ನು ಸಾಹಿತಿ ಹಾಗೂ ನಿರ್ದೇಶಕ ಸುಧೀರ್ ಅತ್ತಾವರ್ ಅವರೇ ಬರೆದಿದ್ದಾರೆ. ಗುಳಿಗ ಗುಳಿಗ ಘೋರ ಗುಳಿಗ! ಎನ್ನುವ ರ್ಯಾಪ್ ಮಿಶ್ರಿತ ಹಾಡು ಅನಾವರಣಗೊಂಡಿದೆ. ದಕ್ಷಿಣ ಭಾರತದ ಖ್ಯಾತ ಸಂಗೀತಗಾರ ಗೋಪಿ ಸುಂದರ್ ಸಂಗೀತವಿದ್ದು, ಖ್ಯಾತ ಬಾಲಿವುಡ್ ಗಾಯಕ ಜಾವೆದ್ ಆಲಿ ಜೊತೆ ಸುಧೀರ್ ಅತ್ತಾವರ್ ಹಾಡಿದ್ದಾರೆ. ಕೆಲ ಭಾಗಗಳಲ್ಲಿ ಗೋಪಿ ಸುಂದರ್ ಕೂಡಾ ಧ್ವನಿ ನೀಡಿದ್ದಾರೆ.

ನೆಲವುಲ್ಲ ಸಂಕೆಯ 24ನೆಯ ಮಗನಾಗಿ ಹುಟ್ಟಿದ “ಗುಳಿಗ” ಹುಟ್ಟುವಾಗಲೇ ಭಯಂಕರ ಹಸಿವಿನಿಂದಾಗಿ ಸಾವಿರ ಕೋಳಿ, ಸಾವಿರ ಕುದುರೆಯ ರಕ್ತ ಹೀರಿದರೂ ಹಸಿವು ನಿಲ್ಲದಿದ್ದಾಗ, ಶ್ರೀಮನ್ನಾರಾಯಣ ದೇವರ ಕಿರುಬೆರಳಿನಿಂದ ಅವರ ರಕ್ತವನ್ನೆಲ್ಲ ಹೀರಿದ ಎನ್ನುವ ಜಾನಪದ ಕಥೆ ಗುಳಿಗನ ಹುಟ್ಟಿನ ಕುರಿತಾಗಿ ಇದೆ. ಇಂತಹ ಘೋರ ಗುಳಿಗನ ಕೋಲ ಸೇವೆಯೂ ತುಳುನಾಡಿನಾದ್ಯಂದ ಆಚರಿಸಲ್ಪಡುತ್ತಿದೆ.
ಈ ಘೋರ ಗುಳಿಗನ ರಕ್ತ ಹೀರುವ ರುದ್ರ ನರ್ತನವನ್ನು ನೋಡಲಾಗದೇ ಭಯಭೀತರಾಗುವ ಅನೇಕರು ಕಣ್ಣು ಮುಚ್ಚಿಕೊಳ್ಳುವುದೂ ಇದೆ. ರಕ್ತ ದಾಹದಿಂದ ಎಲ್ಲೆಂದರಲ್ಲಿ ಓಡುವ ಗುಳಿಗನನ್ನು ಹಿಡಿಯಲು ಹರಸಾಹಸ ಮಾಡುವ ದೃಶ್ಯವಂತೂ ಮೈಜುಂ ಎನಿಸುತ್ತದೆ.
ರುದ್ರಭಯಂಕರ ಗುಳಿಗದೈವ ಪಂಜುರ್ಲಿ ಜೊತೆ ಸೇರಿ “ಕೊರಗಜ್ಜ”ನನ್ನು ಭೇಟಿಯಾಗುವ ಸನ್ನಿವೇಶವು ಚಿತ್ರದಲ್ಲಿ ಮೂಡಿಬರಲಿದೆ.
ಗುಳಿಗ ದೈವದ ರಣ ಭಯಂಕರ ನರ್ತನವನ್ನು ಹಾಲಿವುಡ್-ಬಾಲಿವುಡ್ ಡಾನ್ಸರ್ – ಕೊರಿಯೋಗ್ರಾಫರ್ ಸಂದೀಪ್ ಸೋಪರ್ಕರ್ ನಿರ್ವಹಿಸಿದ್ದು, ಗುಳಿಗ ದೈವದ ರುದ್ರನರ್ತನದ ಕೊರಿಯೋಗ್ರಾಫಿಯನ್ನು ಸ್ವತಃ ಸೋಪರ್ಕರ್ ಮಾಡಿರುತ್ತಾರೆ. ಪಂಜುರ್ಲಿಯಾಗಿ ಸರ್ದಾರ್ ಸತ್ಯ ಅಭಿನಯಿಸಿದ್ದಾರೆ.
ಈ ಹಾಡಿನ ಬಗ್ಗೆ ಮಾತನಾಡಿರುವ ನಿರ್ದೇಶಕ ಸುಧೀರ್ ಅತ್ತಾವರ್, ಈ ಸನ್ನಿವೇಶವನ್ನು ಮಂಗಳೂರಿನ ಸೋಮೇಶ್ವರ ಕಡಲಕಿನಾರೆಯಲ್ಲಿ 100 ಫೀಟ್ನ 2 ಕ್ರೇನ್ಗಳ ಸಹಾಯದಿಂದ 5 ಕ್ಯಾಮರಾಗಳ ಮುಖಾಂತರ ಚಿತ್ರೀಕರಿಸಲು ಮುಂದಾದೆವು. ಆ ವೇಳೆ ರೌಡಿಗಳ ಗ್ಯಾಂಗ್ 2 ದಿನ ದಾಳಿ ಮಾಡಿ, ಚಿತ್ರತಂಡಕ್ಕೆ ಅಪಾರ ನಷ್ಟ ಉಂಟುಮಾಡಿದರು. ಎರಡನೆಯ ದಿನ ನಿರ್ಮಾಪಕ ತ್ರಿವಿಕ್ರಮ ಅವರು ಸುಮಾರು 25 ಬೌನ್ಸರ್ಗಳನ್ನು ನೇಮಿಸಿದ್ದರು. ಆದರೆ ಚಿತ್ರೀಕರಣ ಆರಂಭವಾದ ಕೆಲವೇ ನಿಮಿಷಗಳಲ್ಲಿ ಬಂದ ಬೆದರಿಕೆಯ ಕಾಲ್ನಿಂದ ಬೌನ್ಸರ್ಗಳೇ ಓಡಿಹೋದರು.
ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ಅವರು ರೌಡಿಗಳನ್ನು ತಮ್ಮ ಮಾತಿನಲ್ಲಿ ನಿಯಂತ್ರಿಸಲು ಮುಂದಾದರೂ ಕೇಳದ ಗೂಂಡಾಗಳು ಶೂಟಿಂಗ್ ಸ್ಥಗಿತಗೊಳಿಸಿ ವಿಕೃತಿ ಮೆರೆದಿದ್ದರು. ಆದರೆ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಎದೆಗುಂದದೇ, ಪೊಲೀಸರ ಸರ್ಪಗಾವಲಿನಲ್ಲಿ 3ನೇ ಬಾರಿ ಮತ್ತೆ ಅದೇ ಸೋಮೇಶ್ವರ ಕಡಲ ಕಿನಾರೆಯಲ್ಲಿ ಚಿತ್ರೀಕರಣ ಮುಗಿಸುವಲ್ಲಿ ಯಶಸ್ವಿಯಾದರು.






