ಕೊಟ್ಟ ಖಾತೆ ಮೊದಲು ನಿರ್ವಹಿಸಿ ವರಿಷ್ಠರ ಖಡಕ್ ಸಂದೇಶ; ಖಾತೆ ಬದಲಾವಣೆಗೆ ಪಟ್ಟು ಹಿಡಿದ ಸಚಿವರಿಗೆ ನಿರಾಸೆ
Views: 16
ಕನ್ನಡ ಕರಾವಳಿ ಸುದ್ದಿ: ಖಾತೆ ಬದಲಾವಣೆಗೆ ಪಟ್ಟು ಹಿಡಿದು ದೆಹಲಿ ನಾಯಕರ ಮೇಲೆ ಒತ್ತಡ ಹೇರಿದ್ದ ಸಚಿವರಿಗೆ ನಿರಾಸೆ ಉಂಟಾಗಿದ್ದು, ಕೊಟ್ಟಿರುವ ಖಾತೆಯನ್ನು ಮೊದಲು ನಿರ್ವಹಿಸಿ ನಂತರ ನೋಡೋಣ ಎನ್ನುವ ಸ್ಪಷ್ಟ ಸಂದೇಶ ರವಾನೆಯಾಗಿದೆ ಎನ್ನಲಾಗಿದೆ.
ದೆಹಲಿ ಪ್ರವಾಸದಲ್ಲಿರುವ ಡಿ.ಕೆ.ಶಿವಕುಮಾರ್ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರ ಬಳಿಕ ಸಚಿವರ ಖಾತೆ ಅಸಮಾಧಾನದ ಬಗ್ಗೆ ಮತ್ತೊಮ್ಮೆ ಪ್ರಸ್ತಾಪಿಸಿ, ಈ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ. ಆದರೆ ದೆಹಲಿ ನಾಯಕರು, ಸದ್ಯ ಹಂಚಿಕೆಯಾಗಿರುವ ಖಾತೆಗಳನ್ನೇ ಸಚಿವರು ವಹಿಸಿಕೊಂಡು ಕಾರ್ಯಾರಂಭ ಮಾಡಲಿ. ಅಧಿಕಾರ ವಹಿಸಿಕೊಳ್ಳುವ ಮೊದಲೇ ಕ್ಯಾತೆ ತೆಗೆಯೋದು ಸರಿಯಲ್ಲ ಎನ್ನುವ ಮಾತಾಡಿದ್ದಾರೆ ಎನ್ನಲಾಗಿದೆ.
ಪ್ರಮುಖವಾಗಿ ಬೆಂಗಳೂರು ನಗರಾಭಿವೃದ್ಧಿ ಖಾತೆ ವಿಷಯವಾಗಿ ಕೃಷ್ಣಬೈರೇಗೌಡ ಹಾಗೂ ಆಹಾರ ಇಲಾಖೆ ವಿಷಯದಲ್ಲಿ ಕೆ.ಎಚ್.ಮುನಿಯಪ್ಪ ಅವರ ಅಸಮಾಧಾನದ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಈ ಇಬ್ಬರು ಮೊದಲು ಅಧಿಕಾರ ಸ್ವೀಕರಿಸಲಿ ಎಂದು ಸೂಚಿಸಿದ್ದಾರೆ.
ದೆಹಲಿಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸಹ ಇರುವುದರಿಂದ, ಸಂಪುಟ ವಿಸ್ತರಣೆ, ನಿಗಮ-ಮಂಡಳಿ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಈ ವೇಳೆ ಜಾತಿವಾರು ಹಾಗೂ ಪ್ರಾದೇಶಿಕವಾರು ಹೆಚ್ಚುತ್ತಿರುವ ಒತ್ತಡಕ್ಕೆ ಸಂಬಂಧಿಸಿ ದಂತೆ ಸಿಎಂ, ಡಿಸಿಎಂ ಖರ್ಗೆ ಅವರಿಗೆ ಮಾಹಿತಿ ನೀಡಿದ್ದು, ಮುಂದಿನ ದಿನದಲ್ಲಿ ಈ ಬಗ್ಗೆ ಮತ್ತೊಂದು ಸುತ್ತಿನ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಎರಡನೇ ಹಂತದ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆಯೂ ಡಿ.ಕೆ.ಶಿವಕುಮಾರ್ ಹೈಕಮಾಂಡ್ ನಾಯಕರೊಂದಿಗೆ ಸಭೆ ನಡೆಸಿದ್ದಾರೆ. 18ಕ್ಕೆ ವಿಧಾನಪರಿಷತ್ ಚುನಾವಣೆಯಿದ್ದು, ಐದನೇ ಅಭ್ಯರ್ಥಿಯನ್ನು ಕಣ್ಮು ಇಳಿಸಲಾಗಿದೆ. ಪ್ರತಿಷ್ಠೆಯಾಗಿರುವ ಈ ಚುನಾವಣಾ ಪ್ರಕ್ರಿಯೆ ಬಳಿಕ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸೋಣ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ ಎನ್ನಲಾಗಿದೆ.
→






