ಕರಾವಳಿ

ಕೇರಳದ ಗಡಿಯಲ್ಲಿ ನಕ್ಸಲರು ಪೊಲೀಸರ ನಡುವೆ ಗುಂಡಿನ ಚಕಮಕಿ; ಕರ್ನಾಟಕ ಗಡಿಯಲ್ಲಿ ಕಟ್ಟೆಚ್ಚರ 

Views: 8

ಮಡಿಕೇರಿ: ಕೇರಳದ ಗಡಿ ಜಿಲ್ಲೆ ವಯನಾಡಿನಲ್ಲಿ ನಕ್ಸಲರು ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ನಕ್ಸಲರು ಕರ್ನಾಟಕ ಗಡಿ ನುಸುಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಕೇರಳದ ಗಡಿಯಲ್ಲಿ ನಕ್ಸಲರು ಪೊಲೀಸರ ನಡುವೆ ಗುಂಡಿನ ಚಕಮಕಿಯಿಂದ ನಕ್ಸಲರು ತೊಂದರೆಗೆ ಸಿಲುಕಿದ್ದಾರೆ. ಇದರಿಂದ ಕರ್ನಾಟಕ ಗಡಿಯತ್ತ ನುಸುಳುವ ಶಂಕೆ ಇದೆ. ಮುಂಜಾಗೃತಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಗಡಿಭಾಗದಲ್ಲಿ ನಿಯೋಜನೆ ಮಾಡಲಾಗಿದೆ. ಕೊಡಗಿನ ಕುಟ್ಟ, ಬಿರುನಾಣಿ, ಪರಕಟಗೇರಿ ಹಾಗೂ ತೆರಾಲು ಭಾಗಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ.

ಯಾವುದೇ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ ಕಂಡು ಬಂದರೆ ಕೂಡಲೇ ವಿಚಾರಣೆಗೆ ಒಳಪಡಿಸುವಂತೆ ಎಸ್‍ಪಿ ರಾಮರಾಜನ್ ಆದೇಶ ನೀಡಿದ್ದಾರೆ. ಅಲ್ಲದೇ ಗಡಿ ಭಾಗದಲ್ಲಿ ಸಂಚರಿಸುವ ವಾಹನಗಳ ಮೇಲೂ ಕಣ್ಣಿರಿಸಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳನ್ನು ತಪಾಸಣೆ ಮಾಡಿ ಬಿಡಲಾಗುತ್ತಿದೆ. ತೆರಾಲು ಸೇರಿದಂತೆ ಕೆಲವೆಡೆ ನಾಕಾಬಂದಿ ಹಾಕಲಾಗಿದೆ. ಈಗಾಗಲೇ ಕುಟ್ಟ ಭಾಗದಲ್ಲಿ ಎ.ಎನ್.ಎಫ್. ತಂಡ ಕೆಲಸ ನಿರ್ವಹಿಸುತ್ತಿದೆ. ಇದರೊಂದಿಗೆ ಪೊಲೀಸರು ಈಗ 24 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಗಡಿಭಾಗಕ್ಕೆ ಎಸ್ಪಿ ರಾಮರಾಜನ್, ವೀರಾಜಪೇಟೆ ಡಿವೈಎಸ್ಪಿ ಮೋಹನ್ ಕುಮಾರ್ ಹಾಗೂ ಇತರೆ ಹಿರಿಯ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

Related Articles

Back to top button