ಕೃತಜ್ಞತೆಯ ಜಾರಿನಲ್ಲಿ- ಹೆತ್ತವರಿಗೆ ವಂದನೆ : ತಮ್ಮದಾದುದಕ್ಕೆ ಕೃತಜ್ಞರಾಗುವ ಕಲ್ಪನೆಗೆ ನೃತ್ಯ- ಗಾನಗಳ ನಮನ ಮದರ್ ತೆರೆಸಾ ವಿದ್ಯಾರ್ಥಿಗಳಿಂದ ವಿಶಿಷ್ಟ ಕಾರ್ಯಕ್ರಮ
"ವಿದ್ಯಾರ್ಥಿಗಳು ನಿತ್ಯವು ಕನಿಷ್ಠ ಒಂದು ಧನ್ಯತೆಯ ಕ್ಷಣವನ್ನು ಗುರುತಿಸಿ ಅದನ್ನು ಜಾರ್ ನಲ್ಲಿ ದಾಖಲಿಸಿ ಆಗ ನಮಗೆ ಖಂಡಿತವಾಗಿಯೂ ಮನಸ್ಸಿನಲ್ಲಿ ಸಂತೋಷ, ಸಂಭ್ರಮ ಹೆಚ್ಚಾಗುತ್ತದೆ ಎನ್ನುತ್ತ ಮಕ್ಕಳಲ್ಲಿ ದೇವರಿಗೆ, ತಂದೆ ತಾಯಿಗೆ, ಶಿಕ್ಷಕರಿಗೆ ಮತ್ತು ನಮ್ಮ ಹಿರಿಯರ ಮೇಲೆ ಕೃತಜ್ಞತಾ ಭಾವ ಬೆಳಸಿಕೊಳ್ಳಿ"---- ರೆನಿಟಾ ಲೋಬೊ

Views: 82
ಕನ್ನಡ ಕರಾವಳಿ ಸುದ್ದಿ: ಶಂಕರನಾರಾಯಣ ಮದರ್ ತೆರೆಸಾ ಮೆಮೋರಿಯಲ್ ಶಾಲೆಯಲ್ಲಿ ಜುಲೈ19 ರಂದು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡಿಸಲು ಹಾಗೂ ಮೌಲ್ಯಯುತವಾದ ವಿಚಾರಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ದೃಷ್ಟಿಯಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮೂರನೆಯ ತರಗತಿಯ ವಿದ್ಯಾರ್ಥಿಗಳು ಗ್ರ್ಯಾಟಿಟ್ಯೂಡ್ ಜಾರ್ ( ಕೃತಜ್ಞತೆಯ ಜಾರು) ಎಂಬ ವಿಷಯದ ಕುರಿತು ವಿವಿಧ ಕಾರ್ಯಕ್ರಮಗಳಾದ ಪ್ರಾರ್ಥನೆ, ಭಾಷಣ,ನೃತ್ಯ, ಕಿರು ನಾಟಕ ಹಾಗೂ ಸಂಗೀತ ಮುಂತಾದ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
ಕಾರ್ಯಕ್ರಮದ ಮುಖ್ಯ ಉದ್ದೇಶವು ಮಕ್ಕಳಲ್ಲಿ ಕೃತಜ್ಞತೆಯ ಮೌಲ್ಯವನ್ನು ಬೆಳೆಸುವುದು ಮತ್ತು ಪ್ರತಿದಿನದ ಜೀವನದಲ್ಲಿ ನಾವು ಪಡೆಯುವ ಸಹಾಯ, ಪ್ರೀತಿ, ಮಾರ್ಗದರ್ಶನಕ್ಕೆ ಧನ್ಯವಾದಗಳು ತಿಳಿಸುವ ಮನೋಭಾವನೆಯನ್ನು ರೂಪಿಸುವುದಾಗಿತ್ತು.
ಕಾರ್ಯಕ್ರಮಕ್ಕೆ ಆಗಮಿಸಿದ ಆಡಳಿತ ನಿರ್ದೇಶಕರಾದ ಕುಮಾರಿ ರೆನಿಟಾ ಲೋಬೊ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ವಿದ್ಯಾರ್ಥಿಗಳು ನಿತ್ಯವು ಕನಿಷ್ಠ ಒಂದು ಧನ್ಯತೆಯ ಕ್ಷಣವನ್ನು ಗುರುತಿಸಿ ಅದನ್ನು ಜಾರ್ ನಲ್ಲಿ ದಾಖಲಿಸಿ ಆಗ ನಮಗೆ ಖಂಡಿತವಾಗಿಯೂ ಮನಸ್ಸಿನಲ್ಲಿ ಸಂತೋಷ, ಸಂಭ್ರಮ ಹೆಚ್ಚಾಗುತ್ತದೆ ಎನ್ನುತ್ತ ಮಕ್ಕಳಲ್ಲಿ ದೇವರಿಗೆ, ತಂದೆ ತಾಯಿಗೆ, ಶಿಕ್ಷಕರಿಗೆ ಮತ್ತು ನಮ್ಮ ಹಿರಿಯರ ಮೇಲೆ ಕೃತಜ್ಞತಾ ಭಾವ ಬೆಳಸಿಕೊಳ್ಳುವಂತೆ ಪ್ರೇರೇಪಿಸಿದರು . ಹಾಗೆಯೇ ಇನ್ನೋರ್ವ ಆಡಳಿತ ನಿರ್ದೇಶಕರಾದ ಕುಮಾರಿ ಶಮಿತಾ ರಾವ್ ಇವರು ಅದೇ ಸಂತೋಷ ಹೆಚ್ಚಾಗುವ ಕ್ಷಣಗಳನ್ನು ಮಕ್ಕಳು ನಿಜವಾಗಿ ಅನುಭವಿಸುವಂತಹ ವಾತಾವರಣವನ್ನು ಸೃಷ್ಟಿಸಿ ಕೊಟ್ಟರು ಮತ್ತು ವಿದ್ಯಾರ್ಥಿಗಳು ಕೃತಜ್ಞತೆಯ ನಿಜವಾದ ಖುಷಿಯನ್ನು ಅನುಭವಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮಮತಾ ಪೂಜಾರಿ ಅವರು ನಮಗೆ ಸಹಾಯ ಮಾಡಿದವರಿಗೆ ಒಳ್ಳೆಯ ಮನಸ್ಸಿನಿಂದ ಧನ್ಯವಾದ ಹೇಳುವ ಭಾವನೆಯು, ಉತ್ತಮ ವ್ಯಕ್ತಿತ್ವವನ್ನು ರೂಪಿಸಲು ಸಹಾಯ ಮಾಡುತ್ತದೆ. ಎನ್ನುವ ಉತ್ತಮ ವಿಚಾರವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಕಾರ್ಯಕ್ರಮದ ಮೂಲಕ ಮಕ್ಕಳು ಕಲಾತ್ಮಕ ಪ್ರತಿಭೆ ಪ್ರದರ್ಶಿಸಿದ್ದು ಮಾತ್ರವಲ್ಲದೆ ಹೆತ್ತವರು ನಮಗೆ ಏನು ಕೊಟ್ಟರು ಎನ್ನುವುದಕ್ಕಿಂತ ಅವರು ಎಲ್ಲವನ್ನು ಅತ್ಯಂತ ಪ್ರೀತಿಯಿಂದ ಕೊಟ್ಟಿದ್ದಾರೆ ಎಂಬ ತೃಪ್ತಿಯನ್ನು ನಾವು ಹೊಂದಿ ತಂದೆ ತಾಯಿಯನ್ನು ಸಂತೋಷದಿಂದ ಇರುವಂತೆ ನೋಡಿಕೊಳ್ಳಬೇಕು ಎನ್ನುವುದನ್ನು ತಿಳಿದುಕೊಂಡರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯವರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.