ಕುಂದಾಪುರ: ವಕ್ವಾಡಿ, ಕಟ್ಕೆರೆ, ಮಾಲಾಡಿಯಲ್ಲಿ ಕಪ್ಪು ಚಿರತೆ ಸಂಚಾರ! ಆತಂಕಗೊಂಡ ಜನರು

Views: 512
ಕನ್ನಡ ಕರಾವಳಿ ಸುದ್ದಿ: ತೆಕ್ಕಟ್ಟೆ ಸಮೀಪ ಮಾಲಾಡಿ ಪರಿಸರದಲ್ಲಿ ಕಪ್ಪು ಚಿರತೆಯೊಂದು ಕಳೆದೆರಡು ದಿನಗಳಿಂದಲೂ ಸಂಚರಿಸುತ್ತಿದ್ದು, ಈ ಕುರಿತು ಸ್ಥಳೀಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅರಣ್ಯ ಇಲಾಖೆ ತುರ್ತು ಕ್ರಮ ಕೈಗೊಳ್ಳುವಂತೆ ಸ್ಥಳೀಯ ನಿವಾಸಿ ಸತೀಶ್ ದೇವಾಡಿಗ ಮಾಲಾಡಿ ಅವರು ಆಗ್ರಹಿಸಿದ್ದಾರೆ.
ಇದೇ ಪರಿಸರದ ವಕ್ವಾಡಿ, ಕಾಳಾವರ, ಕಟ್ಕೆರೆ, ಕೆದೂರು, ಮಾಲಾಡಿ ಎಂಬಲ್ಲಿ ಹಲವು ದಿನಗಳಿಂದ ಕಪ್ಪು ಚಿರತೆ ಕಾಣಿಸಿಕೊಂಡಿದ್ದು, ಇತ್ತೀಚೆಗೆ ಕಟ್ಕೆರೆ ಸಮೀಪ ಬೈಕ್ ಸವಾರರ ಮೇಲೆ ಚಿರತೆ ದಾಳಿ ಮಾಡಿದ್ದರಿಂದ ಇಲ್ಲಿನ ಜನರು ಮತ್ತಷ್ಟು ಭಯಭೀತರಾಗಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಕಳೆದ ಮೂರು ವರ್ಷಗಳಿಂದ ಕಪ್ಪು ಚಿರತೆ ಚಿರತೆ ಕಾಣಿಸಿಕೊಂಡಿದೆ. ಮತ್ತೆ ಮಾಲಾಡಿಯಲ್ಲಿ ಕಪ್ಪು ಚಿರತೆ ಪ್ರತ್ಯಕ್ಷವಾಗಿದ್ದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ.
2018 ರಿಂದ ಇಲ್ಲಿಯವರೆಗೆ ಇದೇ ಪರಿಸರದಲ್ಲಿ 8 ಚಿರತೆಗಳು ಬೋನಿಗೆ ಬಿದ್ದಿದೆ. ಒಂದೇ ವರ್ಷದಲ್ಲಿ ನಾಲ್ಕು ಚಿರತೆ ಸೆರೆಯಾಗಿತ್ತು.
ಇಲ್ಲಿನ ರೈತರು ತಮ್ಮ ಜಮೀನಿಗೆ ಹೋಗಲು ಭಯ ಪಡುತ್ತಿದ್ದಾರೆ.ಕೂಲಿ ಕಾರ್ಮಿಕರು ಶಾಲಾ ಮಕ್ಕಳು ಬೆಳಿಗ್ಗೆ ವಾಕಿಂಗ್ ಹೋಗುವವರು ಭಯದಲ್ಲಿಯೇ ತಿರುಗಾಡುವ ಸ್ಥಿತಿ ಬಂದಿದೆ.
ಚಿರತೆ ಕಾಟ ನಾಗರಿಕರನ್ನು ತಲ್ಲಣಗೊಳಿಸಿದೆ.ನಾಯಿ, ಬೆಕ್ಕು, ಹಸುಗಳು ಅವುಗಳಿಗೆ ನಿರಂತರ ಆಹಾರವಾಗುತ್ತಿದೆ. ಜನರು ಕತ್ತಲಾದ ಬಳಿಕ ರಸ್ತೆಯಲ್ಲಿ ಓಡಾಡಲು ಭಯಪಡುವ ಸ್ಥಿತಿ ಇದೆ.
ಕಪ್ಪು ಚಿರತೆ; ಸಾಂದರ್ಭಿಕ ಚಿತ್ರ