ಇತರೆ

ಕುಂದಾಪುರ: ವಕ್ವಾಡಿಯಲ್ಲಿ ಮರದ ಮೇಲೆ ಚಿರತೆ ಪ್ರತ್ಯಕ್ಷ! ಆತಂಕಗೊಂಡ ಜನರು

Views: 615

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ವಕ್ವಾಡಿ ಗ್ರಾಮದ ಪಂಚಾಯತ್ ಸರ್ಕಲ್ ಬಳಿ ಗೇರು ಮರದ ಮೇಲೆ ಚಿರತೆಯೊಂದು ಪ್ರತ್ಯಕ್ಷವಾದ ಘಟನೆಗೆ ಜನರು ಆತಂಕಗೊಂಡಿದ್ದಾರೆ.

ಶುಕ್ರವಾರ ಬೆಳಿಗ್ಗೆ 8:45ರ ಹೊತ್ತಿಗೆ ಇಲ್ಲಿನ ನಿವಾಸಿ ಯಾಕೂಬ್ ಅವರು ಪಂಚಾಯತ್ ಸಮೀಪ ತೋಡಿನ ಹತ್ತಿರ ಬಂದಾಗ ಗೇರು ಮರದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿ ಇವರನ್ನು ನೋಡಿದ ಗುಸುಗುಟ್ಟುತ್ತಿತ್ತು. ಬೆದರಿದ ಯಾಕೂಬ್ ಅವರು ಪ್ರಾಣಾಯಾಪದಿಂದ ಪಾರಾಗಲು ನೀರಿನ ತೋಡಿನಲ್ಲಿ ಮುಳುಗಿಕೊಂಡು ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಈ ಪರಿಸರದ ಅಸೋಡು, ಕಕ್ಕೇರಿ, ಹೂವಿನಕೆರೆ, ಕುರುವಾಡಿ, ಚಾರು ಕೊಟ್ಟಿಗೆ ಪರಿಸರದಲ್ಲಿ ರಾತ್ರಿ ಹಗಲೆನ್ನದೆ  ಚಿರತೆ ಓಡಾಟ ಜೋರಾಗಿದ್ದು, ಅಸೋಡಿನ ತೆಂಗಿನಕಾಯಿ ಫ್ಯಾಕ್ಟರಿ ಸಂಪರ್ಕ ರಸ್ತೆ ಬಳಿ ಆ. 19 ರ ರಾತ್ರಿ 7 ಗಂಟೆಗೆ ಆ ಮಾರ್ಗವಾಗಿ ಸಾಗುತ್ತಿರುವ ವ್ಯಕ್ತಿಯೋರ್ವರು ಕಂಡು ಭಯಭೀತರಾಗಿ ಆಸುಪಾಸಿನ ಜನರಿಗೆ ಮಾಹಿತಿ ನೀಡಿದರು.

ಇಲ್ಲಿನ ಕಕ್ಕೇರಿ ನಿವಾಸಿ ಚಂದ್ರಶೇಖರ ನಾವಡ ಅವರ ಮನೆಯ ಹಾಡಿಯಲ್ಲಿ ಹಗಲು ಹೊತ್ತಿನಲ್ಲಿ ಚಿರತೆ ಸಂಚರಿಸುವುದನ್ನು ಅವರು ಕಂಡಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಪಂದಿಸಿದ ಇಲಾಖೆ ಆ ಭಾಗದಲ್ಲಿ ಚಿರತೆ ಹಿಡಿಯಲು ಬೋನ್ ವ್ಯವಸ್ಥೆ ಮಾಡಲಾಗಿದೆ.

ಗುಡ್ಡ ಹಾಗೂ ಮರ-ಗಿಡಗಳು ಬೆಳೆದಿರುವ ಹೂವಿನಕೆರೆ ರೈಲ್ವೆ ಬ್ರಿಡ್ಜ್, ಕುರುವಾಡಿ ಪರಿಸರದಲ್ಲಿ ಚಿರತೆ ವಾಸವಾಗಿದ್ದು ರಾತ್ರಿ ಆಗುತ್ತಿದ್ದಂತೆ ಗ್ರಾಮದ ಮನೆಗಳಿಗೆ ಪ್ರವೇಶಿಸಿ ಸಾಕು ಪ್ರಾಣಿಗಳಾದ ನಾಯಿ, ದನ ಕರುಗಳು ಮತ್ತು ಕೋಳಿಗಳ ಮೇಲೆ ದಾಳಿ ಮಾಡಿ ಹೊತ್ತುಕೊಂಡು ಹೋಗಿವೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಕಳೆದ ಆರು ತಿಂಗಳಿಂದ ಎರಡು ಚಿರತೆಗಳು ಕಾಣಿಸಿಕೊಂಡಿವೆ.ಇತ್ತೀಚಿಗೆ ಪದೇ ಪದೆ ಚಿರತೆ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ.

ಇಲ್ಲಿನ ರೈತರು ತಮ್ಮ ಜಮೀನಿಗೆ ಹೋಗಲು ಭಯ ಪಡುತ್ತಿದ್ದಾರೆ.ಕೂಲಿ ಕಾರ್ಮಿಕರು ಶಾಲಾ ಮಕ್ಕಳು ಬೆಳಿಗ್ಗೆ ವಾಕಿಂಗ್ ಹೋಗುವವರು ಭಯದಲ್ಲಿಯೇ ತಿರುಗಾಡುವ ಸ್ಥಿತಿ ಬಂದಿದೆ.

ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಅಸೋಡು ಶ್ರೀಮತಿ ಜ್ಯೋತಿ ಗಣೇಶ್ ಅವರ ಮನೆಯ ಮುಂಬಾಗದ ರಸ್ತೆಯಲ್ಲಿ ಚಿರತೆ ಗೋಪಾಲ್ ಶೆಟ್ಟಿ ಅವರ ಸೈಟ್ ಕಡೆಗೆ ಪಾಸಾಗಿದೆ ಎಂಬ ಮಾಹಿತಿಯಂತೆ ಸುತ್ತ ಮುತ್ತಲಿನವರು ಜಾಗ್ರತೆ ವಹಿಸಬೇಕೆಂದು ಊರಿನವರು ಮಾಹಿತಿ ನೀಡಿದ್ದಾರೆ.

ಚಿರತೆ ಕಾಟಕ್ಕೆ ನಲುಗಿರುವ ಜನರು ಭಯದಿಂದ ತಿರುಗಾಡುವ ಸ್ಥಿತಿ ನಿರ್ಮಾಣವಾಗಿದೆ. ಚಿರತೆ ಹಾವಳಿಯಿಂದ ಮುಕ್ತಿ ನೀಡಬೇಕೆಂದು ಸ್ಥಳೀಯ  ಅಸೋಡು,ಕಾಳಾವರ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಚಿತ್ರ: ಸಾಂದರ್ಭಿಕ

Related Articles

Back to top button
error: Content is protected !!