ಕುಂದಾಪುರ: ಮಾಲಾಡಿಯಲ್ಲಿ ಮತ್ತೆ ಚಿರತೆ ಕಾಟ, ಸೆರೆಗಾಗಿ ಬೋನು

Views: 68
ಕನ್ನಡ ಕರಾವಳಿ ಸುದ್ದಿ:ಮಾಲಾಡಿ ಸುತ್ತ ಮುತ್ತ ಪರಿಸರದಲ್ಲಿ ಆಗಾಗ್ಗೆ ಚಿರತೆ ಕಾಣಿಸಿಕೊಳ್ಳುತ್ತಿದ್ದು, ನಾಯಿ, ಜಾನುವಾರು ಸೇರಿದಂತೆ ಸಾಕುಪ್ರಾಣಿಗಳನ್ನು ಬಲಿ ಪಡೆದುಕೊಂಡಿತ್ತು.
2018 ರಿಂದ ಇಲ್ಲಿಯವರೆಗೆ ಇದೇ ಪರಿಸರದಲ್ಲಿ 7 ಚಿರತೆಗಳು ಬೋನಿಗೆ ಬಿದ್ದಿದೆ. ಒಂದೇ ವರ್ಷದಲ್ಲಿ ನಾಲ್ಕು ಚಿರತೆ ಸೆರೆಯಾಗಿತ್ತು. ಇಲ್ಲಿನ ವಕ್ವಾಡಿ, ಹೂವಿನಕೆರೆ, ಉಳ್ತೂರು, ಕೆದೂರು ಮಾಲಾಡಿ ಪರಿಸರದಲ್ಲಿ ನಿರಂತರವಾಗಿ ಸಾಕು ನಾಯಿ, ದನ ಕರುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ, ಮನುಷ್ಯರ ಮೇಲಿನ ದಾಳಿಗೆ ಹೆದರಿದ ಜನರು ಕತ್ತಲಾಗುತ್ತಾ ಮನೆಯಿಂದ ಹೊರಗೆ ಹೋಗಲು ಹೆದರುತ್ತಿದ್ದಾರೆ.
ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲಾಡಿ ಎಂಬಲ್ಲಿನ ಶ್ರೀನಂದಿಕೇಶ್ವರ ದೇವಸ್ಥಾನ ಹಾಗೂ ಅಂಗನವಾಡಿ ಶಾಲೆ ಹಿಂಭಾಗದ ಹಾಡಿಯಲ್ಲಿ ಇದೀಗ ಚಿರತೆ ಮತ್ತೊಮ್ಮೆ ಪ್ರತ್ಯಕ್ಷವಾಗಿದೆ. ನಿರಂತರ ಚಿರತೆ ಓಡಾಟ ಇರುವುದರಿಂದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಕುಂದಾಪುರ ವಲಯ ಅರಣ್ಯಾಧಿಕಾರಿ ರಾಘವೇಂದ್ರ ನೇತೃತ್ವದಲ್ಲಿ ಗಸ್ತು ಅರಣ್ಯ ಪಾಲಕರು ಹಾಗೂ ಸಿಬ್ಬಂದಿಗಳು ಬೋನು ಇಟ್ಟು ಚಿರತೆ ಹಿಡಿಯುವ ಕಾರ್ಯಾಚರಣೆಗೆ ಮುಂದಾಗಿದ್ದಾರೆ.